ADVERTISEMENT

ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ 3.5 ಪಟ್ಟು ಹೆಚ್ಚು

ಕೋವಿಡ್‌-19

ಏಜೆನ್ಸೀಸ್
Published 3 ಸೆಪ್ಟೆಂಬರ್ 2020, 11:06 IST
Last Updated 3 ಸೆಪ್ಟೆಂಬರ್ 2020, 11:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 29.70 ಲಕ್ಷಕ್ಕಿಂತ ಅಧಿಕವಾಗಿದ್ದು, ಈ ಸಂಖ್ಯೆಯು ಸಕ್ರಿಯ ಪ್ರಕರಣಗಳಿಗಿಂತ 3.5 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, 'ಕಳೆದ 24 ಗಂಟೆಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಒಂದೇ ದಿನದಲ್ಲಿ 68,584 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

'ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.62 ಪ್ರಕರಣಗಳು ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿವೆ. ಈ ಐದು ರಾಜ್ಯಗಳಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ದೇಶದ ಶೇ. 70ರಷ್ಟಿದೆ' ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

ADVERTISEMENT

'ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿನ ಇಳಿಕೆಯ ವಾರದ ಪ್ರಮಾಣ ಆಂಧ್ರಪ್ರದೇಶದಲ್ಲಿ ಶೇ.13.7, ಕರ್ನಾಟಕದಲ್ಲಿ ಶೇ 16.1, ಮಹಾರಾಷ್ಟ್ರದಲ್ಲಿ ಶೇ.6.8 ಮತ್ತು ತಮಿಳುನಾಡಿನಲ್ಲಿ ಶೇ.23.9, ಉತ್ತರ ಪ್ರದೇಶದಲ್ಲಿ ಶೇ.17.1ರಷ್ಟು ಕಂಡುಬಂದಿದೆ' ಎಂದು ಅವರು ಹೇಳಿದರು.

'ದೇಶದಲ್ಲಿ ಹಬ್ಬ ಮತ್ತು ಪರೀಕ್ಷೆಗಳು ಸಮೀಪಿಸುತ್ತಿದ್ದು, ಪ್ರತಿಯೊಬ್ಬರೂ ಶಿಸ್ತಿನ ನಡವಳಿಕೆಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆಲ್ಕೋಹಾಲ್‌ ಮಿಶ್ರಿತ ಸ್ಯಾನಿಟೈಸರ್‌ಗಳನ್ನು ಬಳಸಿ, ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ' ಎಂಬ ಸಲಹೆಯನ್ನು ಅವರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.