ADVERTISEMENT

ಕೋವಿಡ್ ಉಲ್ಬಣ: ದೇಶದಲ್ಲಿ ಸಾವಿರಾರು ವೈದ್ಯಕೀಯ ಸಿಬ್ಬಂದಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 11:26 IST
Last Updated 7 ಜನವರಿ 2022, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವವಂತೆಯೇ, ಕೋವಿಡ್-‌೧೯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಜನಸಾಮಾನ್ಯರಲ್ಲಿ ಮಾತ್ರವಲ್ಲದೆ, ವೈದ್ಯರು, ಆರೋಗ್ಯ‌ ಕಾರ್ಯಕರ್ತರಲ್ಲಿಯೂ ಸೋಂಕು ಅಧಿಕ ಪ್ರಮಾಣದಲ್ಲಿ ದೃಢಪಡುತ್ತಿರುವುದು ಆತಂಕದ ಸಂಗತಿಯಾಗಿದೆ.

ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಕಡಿಮೆ ಇದೆ. ಆದಾಗ್ಯೂ, ಆರೋಗ್ಯ ಸಿಬ್ಬಂದಿಯಲ್ಲಿ ಸೋಂಕು ಹೆಚ್ಚಾಗುತ್ತಿರುವುದು ವೈದ್ಯಕೀಯ ವ್ಯವಸ್ಥೆಯಲ್ಲಿ ಒತ್ತಡ ಸೃಷ್ಟಿಸುವ ಸಾಧ್ಯತೆ ಇದೆ. ದೇಶದ ಒಂಬತ್ತು ರಾಜ್ಯಗಳ ಬರೋಬ್ಬರಿ 1700 ವೈದ್ಯರು ಮತ್ತು ಇತರ ವೈದ್ಯಕೀಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಫ್ರಾನ್ಸ್‌ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿರುವುದರಿಂದ, ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಟ್ಟಿದ್ದರೂ, ಗಂಭೀರ ಲಕ್ಷಣಗಳಿಲ್ಲದಿದ್ದರೆ ಇತರ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶವಿದೆ. ಆದರೆ, ಕೋವಿಡ್ ಪ್ರಕರಣಗಳು ಗಂಭೀರವಾಗಿ ಏರುತ್ತಿರುವ ಅಮೆರಿಕದಲ್ಲಿ ಸೋಂಕಿತ ಆರೋಗ್ಯ ಸಿಬ್ಬಂದಿಯನ್ನು ಚಿಕಿತ್ಸೆ ನೀಡುವುದರಿಂದ ದೂರ ಇರಿಸಲಾಗಿದೆ. ಇದರಿಂದ ಸಿಬ್ಬಂದಿ ಕೊರತೆ ಎದುರಾಗಿದೆ. ಭಾರತದಲ್ಲಿಯೂ ಸೋಂಕಿತ ಸಿಬ್ಬಂದಿ ಸಂಖ್ಯೆ ಹೆಚ್ಚಾದರೆ, ವೈದ್ಯಕೀಯ ಸಿಬ್ಬಂದಿಯ ಕೊರತೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ADVERTISEMENT

ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೋವಿಡ್‌ ದೃಢಪಟ್ಟ‌ ವೈದ್ಯಕೀಯ ಸಿಬ್ಬಂದಿಯ ವಿವರ ಇಲ್ಲಿದೆ.

ಪಶ್ಚಿಮ ಬಂಗಾಳ
ರಾಜಧಾನಿ ಕೋಲ್ಕತ್ತ ಸೇರಿದಂತೆ ಇತರ ಭಾಗದ ವಿವಿಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ.

ಬಿಹಾರ
ಬಿಹಾರದಲ್ಲಿ ಸುಮಾರು 300 ವೈದ್ಯಕೀಯ ಸಿಬ್ಬಂದಿಗೆ‌ ಕೋವಿಡ್‌ ಖಚಿತವಾಗಿದೆ. ಪಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಗಯಾದ ಅನುಗ್ರಹ ನಾರಾಯಣ್‌ ಮಗಧ ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರ
ರಾಜ್ಯದಲ್ಲಿ ಇದುವರೆಗೆ 300ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿದೆ. ಮುಂಬೈನ ಸಿಯಾನ್‌ ಆಸ್ಪತ್ರೆಯ 98 ಸಿಬ್ಬಂದಿ , ಜೆಜೆ ಆಸ್ಪತ್ರೆಯ 83 ಸಿಬ್ಬಂದಿ, ಕೆಇಎಂ ಆಸ್ಪತ್ರೆಯ 73 ಸಿಬ್ಬಂದಿ ಮತ್ತು ನಾಯರ್‌ ಆಸ್ಪತ್ರೆಯ 59 ಸಿಬ್ಬಂದಿಗೆ ಸೋಂಕು ತಗುಲಿದೆ. ಸೋಂಕಿನ ಮೊದಲೆರಡು ಅಲೆಗಳ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಹೆಚ್ಚಿನ ಹಾನಿಯಾಗಿತ್ತು.

ಉತ್ತರ ಪ್ರದೇಶ
ಲಖನೌನ ಮೇದಾಂತ ಆಸ್ತ್ರೆಯೊಂದರಲ್ಲೇ, ತುರ್ತು ನಿಗಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ವೈದ್ಯ ಸೇರಿದಂತೆ ಒಟ್ಟು 59 ಸಿಬ್ಬಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಈವರೆಗೆ 75 ವೈದ್ಯರಿಗೆ ಕೋವಿಡ್‌ ದೃಢಪಟ್ಟಿದೆ.

ಜಾರ್ಖಂಡ್
ಜಾರ್ಖಂಡ್‌ನಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ 179 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ.

ದೆಹಲಿ
ರಾಷ್ಟ್ರ ರಾಜಧಾನಿಯಲ್ಲಿಯೂ ಬರೋಬ್ಬರಿ ನೂರಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕೊರೊನಾವೈರಸ್‌ ಹರಡುವಿಕೆ ತಡೆಗಾಗಿ ಇಲ್ಲಿ ವಾರಾಂತ್ಯ ಕರ್ಫ್ಯೂ ಸೇರಿದಂತೆ ಕಟ್ಟುನಿಟ್ಟಿನ ಹಲವು ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಚಂಡೀಗಡ
ಇಲ್ಲಿನ ಪಿಜಿಐ ಮತ್ತು ನಗರ ಆಸ್ಪತ್ರೆಗಳಲ್ಲಿ ಕನಿಷ್ಠ 196 ವೈದ್ಯಕೀಯ ಸಿಬ್ಬಂದಿಗೆ ಸೋಂಕು ಖಚಿತಪಟ್ಟಿರುವುದಾಗಿ ವರದಿಯಾಗಿದೆ.

ಛತ್ತೀಸಗಡ
ರಾಯ್‌ಪುರ ಏಮ್ಸ್‌ನ 33 ವೈದ್ಯರು, ವಿಲಾಸ್‌ಪುರದ 85 ಸಿಬ್ಬಂದಿ, ರಾಯಗಢದ ಲಖಿರಾಂ ವೈದ್ಯಕೀಯ ಕಾಲೇಜಿನ ಮೂವರು ವೈದ್ಯರು ಮತ್ತು ರಾಜನಂದಗಾಂವ್‌ನ ಪೆಂಡ್ರಿ ವೈದ್ಯಕೀಯ ಕಾಲೇಜಿನ 14 ವೈದ್ಯರಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದ 152 ವೈದ್ಯಕೀಯ ಸಿಬ್ಬಂದಿಗೆ ಸೋಂಕು ದೃಢಪಟ್ಟಂತಾಗಿದೆ.

ರಾಜಸ್ಥಾನ
ರಾಜಸ್ಥಾನದಲ್ಲಿ‌ ಕನಿಷ್ಠ 48 ವೈದ್ಯಕೀಯ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ. ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ ರಾಜ್ಯದಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.