ADVERTISEMENT

ಕೋವಿಡ್ ಎರಡನೇ ಅಲೆ: ಖಾಸಗಿ ಉದ್ಯೋಗಸ್ಥರಲ್ಲಿ ಹೆಚ್ಚಿದ ಮಾನಸಿಕ ತುಮುಲ, ಆತಂಕ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 8:44 IST
Last Updated 16 ಜೂನ್ 2021, 8:44 IST
ಸಾಂದರ್ಭಿಕ ಚಿತ್ರ (ಕೃಪೆ – ಪಿಟಿಐ)
ಸಾಂದರ್ಭಿಕ ಚಿತ್ರ (ಕೃಪೆ – ಪಿಟಿಐ)   

ನವದೆಹಲಿ: ‘ಕೋವಿಡ್‌ನಿಂದಾಗಿ ತಂದೆಯನ್ನು ಕಳೆದುಕೊಂಡೆ. ಅನೇಕ ಜವಾಬ್ದಾರಿಗಳು ನನ್ನ ಮೇಲಿದ್ದು ಒತ್ತಡಕ್ಕೆ ಸಿಲುಕಿದ್ದೇನೆ’.

‘ಐಸಿಯುನಲ್ಲಿ ಇದ್ದಾಗ ಅನೇಕ ಸಾವುಗಳನ್ನು ನೋಡಿದ್ದೇನೆ. ವೆಂಟಿಲೇಟರ್ ಸದ್ದು ಕೇಳುವಾಗ ರಾತ್ರಿ ಎಚ್ಚರವಾಗುತ್ತಿತ್ತು. ನಾನ್ಯಾಕೆ ಬದುಕಿದ್ದೇನೆ ಎಂಬುದೇ ಗೊತ್ತಿಲ್ಲ’.

‘ಕೋವಿಡ್‌ನಿಂದಾಗಿ ಅತ್ತೆಯನ್ನು ಕಳೆದುಕೊಂಡಿದ್ದೇನೆ. ನಾನು ಅವರೊಂದಿಗೆ ಎಲ್ಲಾ ಸಮಯದಲ್ಲೂ ವಾದ ಮಾಡಬಾರದಿತ್ತು. ನನ್ನಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ನಿದ್ರಿಸಲೂ ಆಗದೆ ಯಾವಾಗಲೂ ಅಳುತ್ತಿದ್ದೇನೆ’.

ADVERTISEMENT

ಇದು ದೇಶದಲ್ಲಿಂದು ಉದ್ಯೋಗಿಗಳ ವರ್ಗ ಯಾತನೆಯಿಂದ ಅಳುತ್ತಿರುವುದಕ್ಕೆ ಕೆಲವು ಉದಾಹರಣೆಗಳಾಗಿವೆ ಎಂದು ‘ಬ್ಲೂಮ್‌ಬರ್ಗ್’ ತಾಣ ವರದಿ ಮಾಡಿದೆ.

ದೇಶವು ಸಾಂಕ್ರಾಮಿಕ ಹರಡುವಿಕೆಯ ಉತ್ತುಂಗಕ್ಕೆ ತಲುಪಿದೆ. ಸೋಂಕಿತರ ಕುಟುಂಬದವರು ಮತ್ತು ಸ್ನೇಹಿತರು ಆಘಾತಕ್ಕೆ ಒಳಗಾಗುತ್ತಿದ್ದಾರೆ. ಯುವ ಉದ್ಯೋಗಿಗಳ ಮಾನಸಿಕ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬ ಬಗ್ಗೆ ತಂತ್ರಜ್ಞಾನ ಕಂಪನಿಗಳು ಯೋಚಿಸಲಾರಂಭಿಸಿವೆ.

ಹಿಂದೆಂದೂ ಇಂತಹ ಪರಿಸ್ಥಿತಿಯನ್ನು ನೋಡಿಲ್ಲ ಎಂದಿದ್ದಾರೆ ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಮನಃಶಾಸ್ತ್ರಜ್ಞೆ ವಿಜಯಲಕ್ಷ್ಮಿ. ಅವರು ಪ್ರತಿ ವಾರ ಸುಮಾರು 40 ಉದ್ಯೋಗಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಇದು ಕೋವಿಡ್ ಮೊದಲ ಅಲೆಯ ಸಂದರ್ಭಕ್ಕಿಂತಲೂ ಹೆಚ್ಚಾಗಿದೆ.

ಹಲವು ವರ್ಷಗಳಿಂದ ಕಂಪನಿಯಲ್ಲಿ ತರಬೇತುದಾರರ ಜೊತೆ ವಾರ್ಷಿಕ ಪರಾಮರ್ಶೆಯಂತಹ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಅವರು ಈಗ ಆಘಾತದಿಂದ ಬಳಲುತ್ತಿರುವವರ ಜತೆ ಸಮಾಲೋಚನೆ ನಡೆಸಬೇಕಾಗಿ ಬಂದಿದೆ.

ಇತ್ತೀಚೆಗೆ, ಕೋವಿಡ್‌ನಿಂದ ಅತ್ತೆಯನ್ನು ಕಳೆದುಕೊಂಡು ನಿದ್ರಾಹೀನತೆ ಮತ್ತು ಆತಂಕದ ಸಮಸ್ಯೆ ಎದುರಿಸುತ್ತಿರುವ 30 ಉದ್ಯೋಗಿಗಳ ಜತೆ ಅವರು ಸಮಾಲೋಚನೆ ನಡೆಸಬೇಕಾಗಿ ಬಂದಿತ್ತು. ಈ ಪೈಕಿ ಇಬ್ಬರು ಮಹಿಳೆಯರು ತಮ್ಮ ನಡವಳಿಕೆ ಕುರಿತು ತೀವ್ರವಾದ ಅಪರಾಧಿ ಭಾವನೆ ಹೊಂದಿದ್ದರು ಎನ್ನಲಾಗಿದೆ.

ಹಠಾತ್ತಾಗಿ ಎದುರಾದ ಕೋವಿಡ್ ಎರಡನೇ ಅಲೆಯಿಂದ ಉದ್ಯೋಗಿಗಳು ಭಯಭೀತರಾಗಿದ್ದಾರೆ. ಐಸಿಯು, ಆಮ್ಲಜನಕ, ವೈದ್ಯಕೀಯ ಪರಿಕರಗಳ ಪೂರೈಕೆ ಕೊರತೆಯು ಅವರ ಭಯವನ್ನು ಹೆಚ್ಚಿಸಿದೆ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.

ದೇಶದಲ್ಲಿ ಈವರೆಗೆ 2.9 ಕೋಟಿಗೂ ಹೆಚ್ಚು ಜನ ಸೋಂಕಿತರಾಗಿದ್ದು ಮೂರೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ ಜನರ ಮಾನಸಿಕ ಆರೋಗ್ಯದ ಮೇಲೆ ಇದು ಇನ್ನೂ ಹೆಚ್ಚು ಪರಿಣಾಮ ಬೀರಿದೆ ಎಂದು ವರದಿ ಉಲ್ಲೇಖಿಸಿದೆ.

ಎಚ್‌ಸಿಎಲ್‌ನಂತಹ ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳ ಮತ್ತು ಅವರ ಕುಟುಂಬದವರ ಮೇಲಿನ ಮಾನಸಿಕ ಪರಿಣಾಮವನ್ನು ಪಡೆದುಕೊಳ್ಳುತ್ತವೆ. ಎಚ್‌ಸಿಎಲ್‌, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಂತಹ ಕಂಪನಿಗಳು ಉದ್ಯೋಗಿಗಳ ಕಲ್ಯಾಣದತ್ತ ಗಮನ ಹರಿಸುತ್ತಿವೆ. ಆರೋಗ್ಯಕರ ಉದ್ಯೋಗಿಗಳ ತಂಡವು ಉತ್ತಮ ವ್ಯವಹಾರಕ್ಕೆ ಕಾರಣವಾಗುತ್ತದೆ ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿವೆ ಎಂದು ವರದಿ ಉಲ್ಲೇಖಿಸಿದೆ.

ಇಂತಹ ಕಂಪನಿಗಳಲ್ಲಿ ವ್ಯವಸ್ಥಾಪಕರು ಉದ್ಯೋಗ ಮತ್ತು ವೈಯಕ್ತಿಕ ಜೀವನ ಸಮತೋಲನದ ಬಗ್ಗೆ ಒತ್ತು ನೀಡುತ್ತಾರೆ. ಉದ್ಯೋಗಿಗಳ ಹಿತದೃಷ್ಟಿಯಿಂದ ಉತ್ತಮ ಮನಃಶಾಸ್ತ್ರಜ್ಞರ ನೇಮಕ ಮಾಡಿಕೊಂಡಿರುತ್ತವೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಆದರೆ ಇಂತಹ ಕಂಪನಿಗಳಿಗೂ ಕೋವಿಡ್‌ನಿಂದಾದ ಸಮಸ್ಯೆಯನ್ನು ಹೇಗೆ ಸರಿಪಡಿಸಬೇಕು ಎಂಬುದು ಖಚಿತವಾಗಿಲ್ಲ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಉದ್ಯೋಗಿಗಳು ಕೂಡ ಈಗ ಆತಂಕ, ಮನಸ್ಥಿತಿ ಬದಲಾವಣೆ, ಅಸಮರ್ಥತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ನಗರಗಳಲ್ಲಿ ಗ್ರಾಹಕರು ಸಾಮಾನ್ಯ ಜೀವನ ಪುನರಾರಂಭಿಸಿದ್ದು ಈ ಕಂಪನಿಗಳಿಗೆ ಈಗ ಸವಾಲಾಗಿ ಪರಿಣಮಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಾಂಕ್ರಾಮಿಕ ಉತ್ತುಂಗಕ್ಕೆ ತಲುಪಿದ್ದ ವಾರಗಳಲ್ಲಿ ಅನೇಕ ಕಂಪನಿಗಳು ಅಂದಾಜು 50ರಿಂದ 60ರಷ್ಟು ಉತ್ಪಾದಕತೆ ಕುಸಿತ ಕಂಡಿವೆ ಎಂದು ‘ಫಾರೆಸ್ಟರ್ ರಿಸರ್ಚ್ ಇಂಕ್‌’ನ ಉಪಾಧ್ಯಕ್ಷ, ಸಂಶೋಧನಾ ನಿರ್ದೇಶಕ ಆಶುತೋಷ್ ಶರ್ಮ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.