ADVERTISEMENT

ಕೋವಿಡ್‌–19: ಹೆಚ್ಚಿದ ಖಿನ್ನತೆ, ಆತ್ಮಹತ್ಯೆ ಪ್ರಕರಣಗಳು

ಮಾನಸಿಕ ಒತ್ತಡ, ಹಣಕಾಸಿನ ತೊಂದರೆ, ಅನಿಶ್ಚಿತತೆ ಕಾರಣಗಳು: ತಜ್ಞರ ವಿಶ್ಲೇಷಣೆ

ಪಿಟಿಐ
Published 27 ಜೂನ್ 2020, 7:03 IST
Last Updated 27 ಜೂನ್ 2020, 7:03 IST
ಮಾನಸಿಕ ಖಿನ್ನತೆ– ಪ್ರಾತಿನಿಧಿಕ ಚಿತ್ರ
ಮಾನಸಿಕ ಖಿನ್ನತೆ– ಪ್ರಾತಿನಿಧಿಕ ಚಿತ್ರ   

ಚೆನ್ನೈ: ಕೋವಿಡ್‌–19ನಿಂದಾಗಿ ಹಲವರು ಖಿನ್ನತೆಗೆ ಒಳಗಾಗುತ್ತಿದ್ದು, ಕೆಲವೆಡೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ ಎಂದು ಮಾನಸಿಕ ತಜ್ಞರು ವಿಶ್ಲೇಷಿಸಿದ್ದಾರೆ.

ನಿದ್ರಾಹೀನತೆ, ಒಂಟಿತನ, ಸೋಂಕಿಗೆ ಒಳಗಾಗುವ ಭೀತಿ ಹಾಗೂ ಆರ್ಥಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಜನರು ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗ ಕಡಿತ, ಹಣಕಾಸಿನ ತೊಂದರೆ, ಭವಿಷ್ಯದ ಬಗ್ಗೆ ಅನಿಶ್ಚಿತತೆ ಹಾಗೂ ಆಹಾರ ಕೊರತೆಯಾಗುವ ಆತಂಕವೂ ಈ ಸಮಸ್ಯೆಗೆ ಕಾರಣಗಳಾಗಿವೆ. ಕೆಲವರು ಆತಂಕದಿಂದ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿಸಿದ್ದಾರೆ.

ADVERTISEMENT

‘ಕೊರೊನಾ ವೈರಸ್‌ನಿಂದಾಗಿ ಪ್ರತಿಯೊಬ್ಬರು ಒತ್ತಡ ಅಥವಾ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಸಹಿಸಿಕೊಳ್ಳುವ ಸಾಮರ್ಥ್ಯ ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನವಾಗಿದೆ. ಹಲವರು ಒತ್ತಡಗಳನ್ನು ಸುಲಭವಾಗಿ ನಿಭಾಯಿಸಿಕೊಳ್ಳಬಹುದು. ಈ ಮೂಲಕ ಉಲ್ಲಾಸದ ಜೀವನ ನಡೆಸುತ್ತಾರೆ’ ಎಂದು ಚೆನ್ನೈ ಮೂಲದ ಮಾಸ್ಟರ್‌ಮೈಂಡ್‌ ಫೌಂಡೇಷನ್‌ನ ಲೆಫ್ಟಿನೆಂಟ್‌ ಕರ್ನಲ್‌ ಎನ್‌.ಟಿ. ರಾಜನ್‌ ಅಭಿಪ್ರಾಯಪಟ್ಟಿದ್ದಾರೆ.

‘ವೈರಸ್‌ ಸೋಂಕು ದೃಢಪಟ್ಟರೆ ಯಾವ ರೀತಿ ಎದುರಿಸಬೇಕು ಎನ್ನುವ ಬಗ್ಗೆ ಕೌನ್ಸೆಲಿಂಗ್‌ ಅಗತ್ಯವಿದೆ. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ ಬಳಿಕವೂ ಯಾವ ರೀತಿ ಬದುಕಬೇಕು ಎನ್ನುವ ಬಗ್ಗೆ ಕೌನ್ಸೆಲಿಂಗ್‌ ಮಾಡಬೇಕು’ ಎಂದು ಹೇಳಿದ್ದಾರೆ.

ದೇಶದಲ್ಲಿ ಮೊದಲ ಕೊರೊನಾ ವೈರಸ್‌ ಕಾಣಿಸಿಕೊಂಡ ದಿನದಿಂದಲೂ ಮಾಸ್ಟರ್‌ಮೈಂಡ್‌ ಫೌಂಡೇಷನ್‌ ದೇಶದಾದ್ಯಂತ ಜನರಿಗೆ ಉಚಿತ ಕೌನ್ಸಲಿಂಗ್‌ ನೀಡುವ ಕಾರ್ಯದಲ್ಲಿ ತೊಡಗಿದೆ.

‘ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ತೀವ್ರ ಮಾನಸಿಕ ಆರೋಗ್ಯಕ್ಕೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಆತ್ಮಹತ್ಯೆ ಪ್ರಕರಣಗಳು ಹೆಚ್ಚಬಹುದು’ ಎಂದು ಮನೋವೈದ್ಯ ಡಾ.ಎಸ್‌.ಸೇಂಥಿಲ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಮಾರ್ಚ್‌ 1ರಿಂದ ಜೂನ್‌ 20ರ ಅವಧಿ ಒಳಗೆ ಆನ್‌ಲೈನ್‌ ಮೂಲಕ ಸಂಪರ್ಕಿಸುವವರ ಸಂಖ್ಯೆ ಶೇಕಡ 180ರಷ್ಟು ಹೆಚ್ಚಾಗಿದೆ ಎಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕ ಕಾರ್ಯನಿರ್ವಹಿಸುವ ‘ಲಿಬ್ರಾಟ್‌’ ಸಂಸ್ಥೆ ತಿಳಿಸಿದೆ.

ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಅಹಮದಾಬಾದ್‌, ಚೆನ್ನೈಗಳಿಂದ ಅತಿ ಹೆಚ್ಚು ಮಂದಿ ಸಂಪರ್ಕಿಸಿದ್ದರು. ಅದರಲ್ಲೂ 25ರಿಂದ 45 ವರ್ಷದ ಒಳಗಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.