ಮುಂಬೈ: ‘ಇತ್ತೀಚೆಗೆ ಅಪಘಾತಕ್ಕೀಡಾದ ಬೋಯಿಂಗ್ 787–8 ‘ಡ್ರೀಮಲೈನರ್’ ವಿಮಾನವನ್ನು ಉತ್ತಮವಾಗಿ ನಿರ್ವಹಿಸಲಾಗಿತ್ತು. ಹಾರಾಟಕ್ಕೂ ಮುನ್ನ ಅದರಲ್ಲಿ ಯಾವುದೇ ಲೋಪಗಳು ಪತ್ತೆಯಾಗಿರಲಿಲ್ಲ’ ಎಂದು ಏರ್ ಇಂಡಿಯಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಗುರುವಾರ ತಿಳಿಸಿದ್ದಾರೆ.
‘ವಿಮಾನವು 2023ರ ಜೂನ್‌ನಲ್ಲಿ ಪ್ರಮುಖ ತಪಾಸಣೆಗೆ ಒಳಗಾಗಿತ್ತು ಮತ್ತು ಮುಂದಿನ ತಪಾಸಣೆ 2025ರ ಡಿಸೆಂಬರ್‌ನಲ್ಲಿ ನಿಗದಿಯಾಗಿತ್ತು’ ಎಂದು ಅವರು ಹೇಳಿದ್ದಾರೆ.
ಮುಂದಿನ ಕೆಲ ವಾರಗಳವರೆಗೆ ತಾತ್ಕಾಲಿಕ ಕ್ರಮವಾಗಿ ಏರ್ ಇಂಡಿಯಾದ ಅಂತರರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ಶೇ 15ರಷ್ಟು ಕಡಿತವಾಗಲಿದೆ ಎಂದು ಅವರು ವಿಮಾನ ಪ್ರಯಾಣಿಕರಿಗೆ ಕಳುಹಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.
‘ವಿಮಾನದ ಬಲಭಾಗದ ಎಂಜಿನ್ ಅನ್ನು 2025ರ ಮಾರ್ಚ್‌ನಲ್ಲಿ ಮತ್ತು ಎಡಭಾಗದ ಎಂಜಿನ್ ಅನ್ನು 2025ರ ಏಪ್ರಿಲ್‌ನಲ್ಲಿ ಸಮಗ್ರವಾಗಿ ಪರಿಶೀಲಿಸಲಾಗಿತ್ತು. ವಿಮಾನ ಮತ್ತು ಅದರ ಎಂಜಿನ್‌ಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ನಡೆಸಲಾಗಿತ್ತು. ವಿಮಾನ ಹಾರುವುದಕ್ಕೂ ಮುನ್ನ ಯಾವುದೇ ಲೋಪಗಳು ಕಂಡು ಬಂದಿರಲಿಲ್ಲ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ದುರಂತಕ್ಕೆ ಕಾರಣ ಏನು ಎಂಬುದನ್ನು ತಿಳಿಯಬೇಕಿದೆ. ಅದಕ್ಕಾಗಿ ಅಧಿಕಾರಿಗಳು ನೀಡುವ ತನಿಖಾ ವರದಿಯನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬೋಯಿಂಗ್ 787 ಮತ್ತು 777ರ ಹಾರಾಟಕ್ಕೂ ಮುನ್ನ ಸುರಕ್ಷಾ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಈ ಹೆಚ್ಚುವರಿ ಪರಿಶೀಲನೆಯಿಂದಾಗಿ ವಿಮಾನ ಹೊರಡುವ ಸಮಯದಲ್ಲಿ ವ್ಯತ್ಯಾಸಗಳಾಗುತ್ತಿವೆ. ಹೀಗಾಗಿ ಏರ್ ಇಂಡಿಯಾವು ಇದೇ 20ರಿಂದ ಜುಲೈ ಮಧ್ಯದವರೆಗೆ ತನ್ನ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ಶೇ 15ರಷ್ಟು ಕಡಿತ ಮಾಡಲು ನಿರ್ಧರಿಸಿದೆ ಎಂದು ವಿಲ್ಸನ್ ಮಾಹಿತಿ ನೀಡಿದ್ದಾರೆ.
‘ದುರಂತದಿಂದ ಸಂಕಷ್ಟ ಎದುರಿಸುತ್ತಿರುವ ಎಲ್ಲರ ಬೆಂಬಲಕ್ಕೆ ನಿಲ್ಲಲು ಕಂಪನಿ ಬದ್ಧವಾಗಿದೆ. ಅಲ್ಲದೆ ದುರಂತಕ್ಕೆ ಕಾರಣ ತಿಳಿಯಲು ಪ್ರಾಧಿಕಾರದ ಜತೆಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.