ADVERTISEMENT

ಸೆಂಥಿಲ್ ಬಾಲಾಜಿ ಕೇಸ್: ವಿಚಾರಣೆಗೆ ಕ್ರಿಕೆಟ್ ಮೈದಾನವೇ ಬೇಕು– ಸುಪ್ರೀಂ ಕೋರ್ಟ್‌

ಪಿಟಿಐ
Published 30 ಜುಲೈ 2025, 11:05 IST
Last Updated 30 ಜುಲೈ 2025, 11:05 IST
   

ನವದೆಹಲಿ: ಮಾಜಿ ಸಚಿವ ವಿ. ಸೆಂಥಿಲ್‌ ಬಾಲಾಜಿ ಅವರ ವಿರುದ್ಧದ ‘ಉದ್ಯೋಗಕ್ಕಾಗಿ ಹಣ’ ಪ್ರಕರಣದಲ್ಲಿ 2000ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದ ತಮಿಳುನಾಡು ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆ ತೆಗೆದುಕೊಂಡಿತು.

ಎಲ್ಲಾ ಆರೋಪಿಗಳು ಮತ್ತು ಸಾಕ್ಷಿಗಳ ವಿವರವನ್ನು ಸಲ್ಲಿಸುವಂತೆ ಸೂಚಿಸಿದೆ.

ಪ್ರಕರಣವನ್ನು ‘ಚುಕ್ಕಾಣಿ ಇಲ್ಲದ ಹಡಗು’ ಎಂದು ಕರೆದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ನ್ಯಾಯಾಂಗ ಮಧ್ಯಪ್ರವೇಶಿಸದಿದ್ದರೆ, ಈ ಪ್ರಕರಣವನ್ನು ‘ಸಮಾಧಿ’ ಮಾಡಲು ಸರ್ಕಾರ ಬಯಸಿತ್ತು ಎಂದು ಹೇಳಿದೆ.

ADVERTISEMENT

‘2000ಕ್ಕೂ ಹೆಚ್ಚು ಆರೋಪಿಗಳು, 500 ಸಾಕ್ಷಿಗಳು.. ನ್ಯಾಯಾಂಗದ ಆವರಣ ಕಿಕ್ಕಿರಿದು ಹೋಗಬಹುದು. ಇದಕ್ಕೆ ವಿಚಾರಣಾ ನ್ಯಾಯಾಲಯದ ಸಣ್ಣ ಕೊಠಡಿ ಸಾಕಾಗುವುದಿಲ್ಲ. ಆರೋಪಿಗಳ ಉಪಸ್ಥಿತಿಯನ್ನು ಗುರುತಿಸಲು ಕ್ರಿಕೆಟ್‌ ಮೈದಾನವೇ ಬೇಕಾಗಬಹುದು’ ಎಂದು ಸೆಂಥಿಲ್‌ ಬಾಲಾಜಿ ಪರ ಹಾಜರಾದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರಿಗೆ ಪೀಠ ಹೇಳಿದೆ.

ವಿಶೇಷ ಪಬ್ಲಿಷ್‌ ಪ್ರಾಸಿಕ್ಯೂಟರ್‌ ನೇಮಿಸಬೇಕು ಎಂಬ ಮನವಿಗೆ, ‘ಪ್ರಭಾವಿ ಸಚಿವರು ಮತ್ತು ಶ್ರೀಮಂತರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾಗ, ಒಬ್ಬ ಪಬ್ಲಿಕ್ ಪ್ರಾಸಿಕ್ಯೂಟರ್‌ನಿಂದ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವಿದೆ’ ಎಂದು ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರಿಗೆ ಪೀಠವು ಹೇಳಿದೆ.

ಮಂಗಳವಾರ, ಪ್ರಕರಣದಲ್ಲಿ 2000ಕ್ಕೂ ಹೆಚ್ಚು ಜನರನ್ನು ಆರೋಪಿಗಳನ್ನಾಗಿ ಮಾಡಿರುವುದಕ್ಕೆ ತಮಿಳುನಾಡು ಸರ್ಕಾರದ ವಿರುದ್ಧ ನ್ಯಾಯಾಲಯವು ಅಸಮಾಧಾನ ಹೊರಹಾಕಿತ್ತು. ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುವ ಮೂಲಕ ಸರ್ಕಾರವು, ನ್ಯಾಯಾಂಗ ವ್ಯವಸ್ಥೆಗೆ ವಂಚನೆ ಎಸಗಿದೆ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.