ADVERTISEMENT

ಕ್ರಿಮಿನಲ್ ಜಾಲದಿಂದ ಕೋವಿಡ್ ನಕಲಿ ಲಸಿಕೆ ಮಾರಾಟ ಸಾಧ್ಯತೆ; ಇಂಟರ್‌ಪೋಲ್ ಎಚ್ಚರಿಕೆ

ಪಿಟಿಐ
Published 3 ಡಿಸೆಂಬರ್ 2020, 16:23 IST
Last Updated 3 ಡಿಸೆಂಬರ್ 2020, 16:23 IST
ಇಂಟರ್‌ಪೋಲ್
ಇಂಟರ್‌ಪೋಲ್   

ನವದೆಹಲಿ: ವ್ಯವಸ್ಥಿತ ಕ್ರಿಮಿನಲ್‌ ಜಾಲವು ನಕಲಿ ಕೋವಿಡ್‌–19 ಲಸಿಕೆಯ ಜಾಹೀರಾತು ನೀಡುವ ಹಾಗೂ ಮಾರಾಟ ಮಾಡಲು ಪ್ರಯತ್ನಿಸುವ ಸಾಧ್ಯತೆ ಇರುವುದಾಗಿ ಇಂಟರ್‌ಪೋಲ್‌ ಜಾಗತ್ತಿನಾದ್ಯಂತ ಪೊಲೀಸರು, ತನಿಖಾ ಸಂಸ್ಥೆಗಳಿಗೆ ಎಚ್ಚರಿಕೆ ರವಾನಿಸಿದೆ.

ಇಂಟರ್‌ಪೋಲ್‌ನ ಎಲ್ಲ 194 ಸದಸ್ಯ ರಾಷ್ಟ್ರಗಳಿಗೆ ಬುಧವಾರ ಆರೆಂಜ್‌ ನೋಟಿಸ್‌ ಜಾರಿ ಮಾಡಿದ್ದು, 'ನಕಲಿ ಹಾಗೂ ಕಾನೂನು ಬಾಹಿರವಾಗಿ ಕೋವಿಡ್‌–19 ಮತ್ತು ಫ್ಲೂ ಲಸಿಕೆಗಳ ಬಗ್ಗೆ ಪ್ರಚಾರ' ಸಂಬಂಧಿಸಿದ ಅಪರಾಧ ಚಟುವಟಿಕೆಗಳ ಬಗ್ಗೆ ರಾಷ್ಟ್ರೀಯ ಸಂಸ್ಥೆಗಳು ಎಚ್ಚರ ವಹಿಸುವಂತೆ ಸೂಚಿಸಿದೆ.

ನಕಲಿ ಲಸಿಕೆಗಳ ಜಾಹೀರಾತು ನೀಡುತ್ತಿರುವುದು, ಮಾರಾಟ ಹಾಗೂ ನಿಯಂತ್ರಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಇಂಟರ್‌ಪೋಲ್‌ ಪ್ರಕಟಣೆಯಲ್ಲಿ ತಿಳಿಸಿದೆ. ನೇರವಾಗಿ ಮತ್ತು ಇಂಟರ್‌ನೆಟ್‌ ಮೂಲಕ ಲಸಿಕೆ ಮಾರಾಟ ಮಾಡಲು ಪ್ರಯತ್ನ ನಡೆಯಬಹುದಾಗಿದೆ ಎಂದು ತಿಳಿಸಿದೆ.

ADVERTISEMENT

ಕೋವಿಡ್‌–19 ಲಸಿಕೆಯ ಬಳಕೆಗೆ ಇಂಗ್ಲೆಂಡ್‌ ಅನುಮೋದನೆ ನೀಡಿದ ದಿನವೇ ಇಂಟರ್‌ಪೋಲ್‌ನಿಂದ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಭಾರತದಲ್ಲಿ ಸಿಬಿಐ ಲಸಿಕೆ ಸಂಬಂಧಿಸಿದ ಅಪರಾಧ ಚಟುವಟಿಕೆಗಳ ಬಗ್ಗೆ ನಿಗಾವಹಿಸಿದೆ.

ಲಸಿಕೆ ಪೂರೈಕೆ ಜಾಲದ ಸುರಕ್ಷತೆಯ ಬಗ್ಗೆ ಗಮನ ವಹಿಸುವಂತೆ ಇಂಟರ್‌ಪೋಲ್‌ ಪೊಲೀಸ್‌ ಇಲಾಖೆಗಳಿಗೆ ಸಲಹೆ ನೀಡಿದ್ದು, 'ನಕಲಿ ಲಸಿಕೆಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗಳನ್ನು ಗುರುತಿಸುವುದು ಮುಖ್ಯ. ಸುಳ್ಳು ಭರವಸೆಗಳಿಂದ ಜನರನ್ನು ಸೆಳೆದು ಲಸಿಕೆ ಮಾರಾಟವಾದರೆ, ಜನರ ಆರೋಗ್ಯ ಹಾಗೂ ಜೀವಕ್ಕೆ ಕುತ್ತಾಗಬಹುದಾಗಿದೆ' ಎಂದು ಇಂಟರ್‌ಪೋಲ್‌ ಪ್ರಧಾನ ಕಾರ್ಯದರ್ಶಿ ಯೋರ್ಗೆನ್‌ ಸ್ಟಾಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ ಫಾರ್ಮಸಿಗಳೊಂದಿಗೆ ಸಹಭಾಗಿತ್ವ ಹೊಂದಿರುವ ವೆಬ್‌ಸೈಟ್‌ಗಳ ಪೈಕಿ ಅಕ್ರಮ ಔಷಧ ಮಾರಾಟ ಮಾಡುತ್ತಿರುವ ಸಂಶಯಗಳಿಂದ ಸುಮಾರು 3,000 ಜಾಲತಾಣಗಳನ್ನು ಇಂಟರ್‌ಪೋಲ್‌ನ ಸೈಬರ್‌ಕ್ರೈಮ್‌ ತಂಡವು ಪರಿಶೀಲಿಸಿದೆ. ಅವುಗಳಲ್ಲಿ ಸುಮಾರು 1,700 ವೆಬ್‌ಸೈಟ್‌ಗಳಿಂದ ಫಿಶಿಂಗ್‌, ಸ್ಪ್ಯಾಮಿಂಗ್‌ ರೀತಿಯ ಸೈಬರ್‌ ದಾಳಿ ಎದುರಾಗುವ ಅಪಾಯ ಕಂಡುಬಂದಿದೆ. ಇದರಿಂದಾಗಿ ಹಣಕಾಸು ಮತ್ತು ಆರೋಗ್ಯ ಎರಡರ ಮೇಲೂ ಅಪಾಯ ಉಂಟಾಗಬಹುದಾಗಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.