ADVERTISEMENT

ಉಗ್ರರಿಗೆ ಹಣ: ‘ಕ್ರಿಪ್ಟೊ ಹವಾಲಾ’ ಜಾಲ ಸಕ್ರಿಯ

ಜಮ್ಮು–ಕಾಶ್ಮೀರ: ಪ್ರತ್ಯೇಕತಾವಾದಿಗಳಿಗೆ ಮರುಜೀವ ನೀಡಿದ ಹೊಸ ಮಾರ್ಗ

ಪಿಟಿಐ
Published 18 ಜನವರಿ 2026, 22:30 IST
Last Updated 18 ಜನವರಿ 2026, 22:30 IST
–
   

ಶ್ರೀನಗರ/ನವದೆಹಲಿ: ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಒದಗಿಸುವುದಕ್ಕಾಗಿ ಅತ್ಯಾಧುನಿಕ ‘ಕ್ರಿಪ್ಟೊ ಹವಾಲಾ’ ಜಾಲ ಸಕ್ರಿಯವಾಗಿವೆ. ಈ ಜಾಲದ ಮೂಲಕ ವಿದೇಶಗಳಿಂದ ಹಣ ಹರಿದು ಬರುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ದೇಶದಲ್ಲಿ ನಡೆಯುವ ಹಣಕಾಸು ವಹಿವಾಟು ಮೇಲೆ ಕಣ್ಗಾವಲಿರಿಸಲು ಹಲವು ನಿಯಮಗಳು–ತಂತ್ರಜ್ಞಾನ ಆಧಾರಿತ ವಿಧಾನಗಳು ಇವೆ. ಆದರೆ, ‘ಕ್ರಿಪ್ಟೊ ಹವಾಲಾ’ ಜಾಲವನ್ನು ಪತ್ತೆ ಮಾಡುವುದು ಸದ್ಯ ಜಾರಿಯಲ್ಲಿರುವ ವಿಧಾನಗಳಿಂದ ಕಷ್ಟವಾಗುತ್ತಿದೆ ಎಂದು ಕೇಂದ್ರೀಯ ಸಂಸ್ಥೆಗಳು ಭಾನುವಾರ ಎಚ್ಚರಿಸಿವೆ.

‘ಈ ಅಕ್ರಮ ಮಾರ್ಗದ ಮೂಲಕ ಸಿಗುತ್ತಿರುವ ಹಣವು ಜಮ್ಮು–ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳಿಗೆ ಮತ್ತೆ ಜೀವ ನೀಡಿದಂತಾಗಿದೆ ಹಾಗೂ ದೇಶ ವಿರೋಧಿ ಕೃತ್ಯಗಳಿಗೆ ಪ್ರಚೋದನೆ ನೀಡಲು ಕುಮ್ಮಕ್ಕು ನೀಡುತ್ತಿದೆ’ ಎಂದು ಜಮ್ಮು–ಕಾಶ್ಮೀರ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಈ ಮೊದಲು ಹವಾಲಾ ವ್ಯವಸ್ಥೆ ಮೂಲಕ ಹಣ ಸಾಗಿಸಲಾಗುತ್ತಿತ್ತು. ಈಗ, ಡಿಜಿಟಲ್ ರೂಪದಲ್ಲಿರುವ ಕ್ರಿಪ್ಟೊ ಕರೆನ್ಸಿಗಳನ್ನು ಬಳಸಲಾಗುತ್ತದೆ. ಕ್ರಿಪ್ಟೊಕರೆನ್ಸಿಗಳನ್ನು ನಿಯಂತ್ರಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲದ ಕಾರಣ, ಈ ವ್ಯವಸ್ಥೆ ಮೂಲಕ ನಡೆಯುವ ಹಣದ ವಹಿವಾಟನ್ನು ಪತ್ತೆ ಮಾಡುವುದು ಕಷ್ಟ’ ಎಂದು ವಿವರಿಸಿದ್ದಾರೆ.

‘ಕ್ರಿಪ್ಟೊ ಹವಾಲಾ’ ಜಾಲ ಹೊಸ ಸವಾಲಾಗಿ ಪರಿಣಮಿಸಿದೆ. ಈ ವ್ಯವಸ್ಥೆ ಮೂಲಕ ದೇಶದ ಆರ್ಥಿಕತೆಗೆ ಸೇರುವ ಹಣದ ವಹಿವಾಟಿನ ಜಾಡು ಪತ್ತೆ ಮಾಡುವುದು ಕಷ್ಟ
ಜಮ್ಮು–ಕಾಶ್ಮೀರ ಪೊಲೀಸ್‌

ತನಿಖೆ ಹೇಳುವುದೇನು?

* ಚೀನಾ ಮಲೇಷ್ಯಾ ಮ್ಯಾನ್ಮಾರ್ ಹಾಗೂ ಕಾಂಬೋಡಿಯಾದಲ್ಲಿರುವ ಕೆಲವರು ಖಾಸಗಿ ಕ್ರಿಪ್ಟೊ ವ್ಯಾಲೆಟ್‌ ತೆರೆಯುವಂತೆ ಜಮ್ಮು–ಕಾಶ್ಮೀರದ ವ್ಯಕ್ತಿಗೆ ಸೂಚಿಸುತ್ತಾರೆ

* ವಿಪಿಎನ್‌ ಬಳಸಿ ಇಂತಹ ವ್ಯಾಲೆಟ್‌ ತೆರೆಯಲಾಗುತ್ತದೆ. ಹೀಗಾಗಿ ಕೆವೈಸಿ ಅಥವಾ ಗುರುತು ದೃಢೀಕರಣದ ಅಗತ್ಯ ಕಂಡುಬರುವುದಿಲ್ಲ

* ವಿದೇಶಗಳಲ್ಲಿರುವವರು ಈ ಖಾಸಗಿ ವ್ಯಾಲೆಟ್‌ಗಳಿಗೆ ಕ್ರಿಪ್ಟೊಕರೆನ್ಸಿಗಳನ್ನು ಜಮೆ ಮಾಡುತ್ತಾರೆ. ವ್ಯಾಲೆಟ್‌ ಹೊಂದಿರುವ ವ್ಯಕ್ತಿ ದೆಹಲಿ ಅಥವಾ ಮುಂಬೈನಂತಹ ಮಹಾನಗರಗಳಿಗೆ ತೆರಳಿ ಅಲ್ಲಿರುವ ‘ಪಿಯರ್‌–ಟು–ಪಿಯರ್’(ಪಿ2ಪಿ) ಟ್ರೇಡರ್‌ಗಳಿಗೆ ಈ ಕ್ರಿಪ್ಟೊಕರೆನ್ಸಿಗಳನ್ನು ಮಾರಾಟ ಮಾಡಿ ಅದರ ಬದಲಾಗಿ ಹಣವನ್ನು ಪಡೆದುಕೊಳ್ಳುತ್ತಾರೆ

* ಪಿ2ಪಿ ಟ್ರೇಡರ್‌ಗಳ ನಿಯಂತ್ರಣ ವ್ಯವಸ್ಥೆ ಭಾರತದಲ್ಲಿ ಇಲ್ಲ. ಹಾಗಾಗಿ ಈ ಮಾರ್ಗದ ಮೂಲಕ ದೇಶದ ಒಳಗೆ ಹರಿದು ಬರುವ ಹಣವನ್ನು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.