ADVERTISEMENT

ರಾಮನ ಹಣೆಗೆ ಸೂರ್ಯ ಕಿರಣ ಸ್ಪರ್ಶ: ವಿವಾದಕ್ಕೆ ಎಡೆಮಾಡಿಕೊಟ್ಟ ಸಿಎಸ್‌ಐಆರ್‌ ಯೋಜನೆ

ವಿವಾದಕ್ಕೆ ಎಡೆಮಾಡಿಕೊಟ್ಟ ಸಿಎಸ್‌ಐಆರ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 4:48 IST
Last Updated 22 ನವೆಂಬರ್ 2022, 4:48 IST
ರಾಮ ಮಂದಿರದ ಮಾದರಿ
ರಾಮ ಮಂದಿರದ ಮಾದರಿ   

ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮನ ಮೂರ್ತಿಯ ಹಣೆಗೆ 2024ರ ರಾಮ ನವಮಿಯಂದು ಸೂರ್ಯನ ಕಿರಣ ಸ್ಪರ್ಶಿಸುವಂತೆ ಮಾಡುವ ಯೋಜನೆಯೊಂದನ್ನುವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್‌ಐಆರ್‌) ಕೈಗೊಂಡಿದೆ. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಸಿಎಸ್‌ಐಆರ್–ಸಿಬಿಆರ್‌ಐನ ವಿಜ್ಞಾನಿಗಳನ್ನು ಒಳಗೊಂಡ ತಂಡವುರಾಮನ ಹಣೆಗೆ ಸೂರ್ಯನ ಕಿರಣ ಹೇಗೆ ಸ್ಪರ್ಶಿಸುತ್ತದೆ ಎಂಬುದನ್ನು ಇತ್ತೀಚೆಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದೆ ಎಂದು ಸಿಎಸ್‌ಐಆರ್‌ ಸೋಮವಾರ ಟ್ವೀಟ್‌ ಮಾಡಿದೆ. ಇದನ್ನು ಹಲವರು ಟೀಕಿಸಿದ್ದಾರೆ.

‘ಸಿಎಸ್‌ಐಆರ್‌, ಸಾರ್ವಜನಿಕರ ಹಣದಿಂದ ನಡೆಯುತ್ತಿರುವ ಸಂಸ್ಥೆ. ನಮ್ಮ ತೆರಿಗೆ ಹಣವನ್ನು ಈ ಸಂಸ್ಥೆಗಾಗಿ ವಿನಿಯೋಗಿಸಲಾಗುತ್ತದೆ. ಸಂಸ್ಥೆಯು ಇಂತಹ ಯೋಜನೆ ಕೈಗೊಂಡಿರುವುದು ತಲೆ ತಗ್ಗಿಸುವಂತಹದ್ದು’ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ನನ್ನನ್ನು ಸಂಪರ್ಕಿಸಿದ್ದ ಹಿರಿಯ ವಿಜ್ಞಾನಿಯೊಬ್ಬರು ತಾನು ಭಾರತೀಯ ವಿಜ್ಞಾನಿ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತ‍ಪಡಿಸಿದ್ದಾರೆ’ ಎಂದೂ ಹೇಳಿದ್ದಾರೆ.

ಈ ಯೋಜನೆಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳ ತಂಡವು ತಮ್ಮ ನಿಲುವು ಸಮರ್ಥಿಸಿಕೊಂಡಿದೆ. ಇದು ಎಂಜಿನಿಯರಿಂಗ್‌ ವಲಯಕ್ಕೆ ದೊಡ್ಡ ಸವಾಲಾಗಿದೆ ಎಂದೂ ತಂಡ ತಿಳಿಸಿದೆ.

ರೂರ್ಕಿಯಲ್ಲಿರುವ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ), ಬೆಂಗಳೂರಿನಭಾರತೀಯ ಖಭೌತಶಾಸ್ತ್ರ ಸಂಸ್ಥೆ (ಐಐಎ) ಹಾಗೂ ಪುಣೆಯ ಇಂಟರ್‌ ಯೂನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರೋನಮಿ ಆ್ಯಂಡ್‌ ಆಸ್ಟ್ರೋಫಿಸಿಕ್ಸ್‌ನ ವಿಜ್ಞಾನಿಗಳು ಈ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಖಗೋಳ ಲೆಕ್ಕಾಚಾರ ಮತ್ತು ಆಪ್ಟೋ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಸವಾಲುಗಳ ಕುರಿತ ಅಧ್ಯಯನ ಕೈಗೊಂಡಿದ್ದಾರೆ.

‘ಇದೊಂದು ಸವಾಲಿನ ಕೆಲಸ. ಇದಕ್ಕಾಗಿ ನಾವು ಚಂದ್ರನ ಕ್ಯಾಲೆಂಡರ್‌ ಅನುಸರಿಸಬೇಕಾಗುತ್ತದೆ. ನಿರ್ದಿಷ್ಟ ವರ್ಷದ ನಿಗದಿತ ದಿನದಂದು ಸೂರ್ಯ ಯಾವ ಸ್ಥಾನದಲ್ಲಿ ಇರುತ್ತಾನೆ ಎಂಬುದನ್ನು ಅರಿಯಲು ಸೌರ ಕ್ಯಾಲೆಂಡರ್‌ ಅನ್ನು ಅವಲೋಕಿಸಬೇಕಾಗುತ್ತದೆ. ಸೂರ್ಯನ ಸ್ಥಾನವನ್ನು ಖಚಿತಪಡಿಸಿಕೊಂಡ ಬಳಿಕ ಅದರ ಕಿರಣಗಳು ಕನ್ನಡಿಗಳ ಮೇಲೆ ಬಿದ್ದು ಅದು ರಾಮನ ಹಣೆ ಮೇಲೆ ಪ್ರತಿಫಲಿಸುವಂತೆ ಮಾಡುವ ಯಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಬೇಕಾಗುತ್ತದೆ’ ಎಂದು ಸಿಎಸ್‌ಐಆರ್‌ನ ಮಾಜಿ ಮಹಾನಿರ್ದೇಶಕ ಶೇಖರ್‌ ಮಾಂಡೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸಿಎಸ್‌ಐಆರ್‌ ಮಹಾನಿರ್ದೇಶಕಿ ಎನ್‌.ಕಲೈಸಲ್ವಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಯೋಜನೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.