ADVERTISEMENT

ಕೋಮು ಘರ್ಷಣೆ: ರಾಜಸ್ಥಾನದ ಕರೌಲಿಯಲ್ಲಿ ಕಲ್ಲು ತೂರಾಟ, ಕರ್ಫ್ಯೂ ಜಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2022, 3:20 IST
Last Updated 3 ಏಪ್ರಿಲ್ 2022, 3:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ರಾಜಸ್ಥಾನದ ಕರೌಲಿಯಲ್ಲಿ, ಹಿಂದೂ ಹೊಸ ವರ್ಷಾಚರಣೆಯ ಅಂಗವಾಗಿ ನಡೆದ ಬೈಕ್ ರ‍್ಯಾಲಿ ವೇಳೆ ಎರಡು ಕೋಮುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಶನಿವಾರ ಸಂಜೆ ಘಟನೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕರೌಲಿ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜತೆಗೆ, ಇಂಟರ್ನೆಟ್ ಸೇವೆ ನಿರ್ಬಂಧಿಸಲಾಗಿದೆ.

ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಹಿಂದೂಗಳ ಬೈಕ್ ರ‍್ಯಾಲಿ ಹಾದು ಹೋಗುವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ 42 ಜನರು ಗಾಯಗೊಂಡಿದ್ದಾರೆ. ಕೆಲವೆಡೆ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿಲಾಗಿದೆ. ಪ್ರಕರಣ ಸಂಬಂಧ ಇದುವರೆಗೆ 30 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಗುಮಾರಿಯಾ ತಿಳಿಸಿದ್ದಾರೆ.

ADVERTISEMENT

ಘರ್ಷಣೆಯಲ್ಲಿ ಗಾಯಗೊಂಡವರಲ್ಲಿ ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ. 10 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಜೈಪುರದ ಎಸ್‌ಎಂಎಸ್‌ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕರೌಲಿಯಲ್ಲಿ ಸೋಮವಾರ ರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಏ.3ರ (ಭಾನುವಾರ) ಮಧ್ಯರಾತ್ರಿಯವರೆಗೆ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರವಹಿಸಲಾಗಿದ್ದು, ಕರೌಲಿಯಲ್ಲಿ 650ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಪೊಲೀಸರಿಗೆ ಸೂಚಿಸಿದ್ದಾರೆ.

ಕರೌಲಿ ಹಿಂಸಾಚಾರದ ಬಗ್ಗೆ ಡಿಜಿಪಿ ಎಂ.ಎಲ್. ಲಾಥರ್ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿದ್ದೇನೆ ಎಂದು ರಾಜಸ್ಥಾನದ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.