ಮುಂಬೈ,: ತಮ್ಮ ಹದಿಹರೆಯದ ಮಗಳು ಮೊಬೈಲ್‌ನಲ್ಲಿ ಆನ್‌ಲೈನ್ ವಿಡಿಯೊ ಗೇಮ್ ಆಡುವಾಗ ನಗ್ನ ಫೋಟೊ ಕಳುಹಿಸಲು ದುಷ್ಕರ್ಮಿಯೊಬ್ಬ ಕೇಳಿದ್ದ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
ಕೂಡಲೇ ಮಗಳು ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ಒಳಗೊಂಡಂತೆ ಸೇರಿದ್ದ ಜನರ ಮುಂದೆಯೇ ನಟ ಈ ಆತಂಕಕಾರಿ ಘಟನೆಯನ್ನು ಹಂಚಿಕೊಂಡರು. ಕೆಲವು ತಿಂಗಳ ಹಿಂದೆ ನನ್ನ ಮಗಳು ಆನ್‌ಲೈನ್ ವಿಡಿಯೊ ಗೇಮ್ ಆಡುತ್ತಿದ್ದಾಗ, ಆರಂಭದಲ್ಲಿ ಸ್ನೇಹಪರ ಮತ್ತು ಪ್ರೋತ್ಸಾಹದಾಯಕ ಸಂದೇಶಗಳನ್ನು ಕಳುಹಿಸಿದ್ದ ಅಪರಿಚಿತ ವ್ಯಕ್ತಿ ಇದ್ದಕ್ಕಿದ್ದಂತೆ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಕೇಳಿದ್ದ. ಕೂಡಲೇ ನನ್ನ ಮಗಳು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ತಾಯಿಯ ಬಳಿಗೆ ಹೋಗಿ ಘಟನೆ ಕುರಿತಂತೆ ವಿವರಿಸಿದ್ದಳು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ತನ್ನ ಮಗಳ ಜಾಗರೂಕತೆಯು ಸೈಬರ್ ಅಪರಾಧಿಗಳಿಗೆ ಬಲಿಯಾಗುವುದನ್ನು ತಡೆಯಿತು ಎಂದು ನಟ ಹೇಳಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೈಬರ್ ಜಾಗೃತಿ ಮಾಸದ ಉದ್ಘಾಟನೆಯ ನಂತರ ಮಾತನಾಡಿದ ನಟ, ರಾಜ್ಯದ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಶಾಲೆಗಳಲ್ಲಿ ಸೈಬರ್ ಜಾಗೃತಿಯನ್ನು ಮೂಡಿಸಬೇಕು ಎಂದು ಮುಖ್ಯಮಂತ್ರಿ ಫಡಣವೀಸ್ ಅವರಿಗೆ ಮನವಿ ಮಾಡಿದರು.
ತಮ್ಮ ಮಗಳು ಆನ್‌ಲೈನ್ ಗೇಮ್ ಆಡುತ್ತಿದ್ದಾಗ ಆಕೆಯನ್ನು ಪರಿಚಯ ಮಾಡಿಕೊಂಡು, ಆಕೆಯ ಮೂಲ, ಹೆಣ್ಣೋ ಗಂಡೋ ಎಂಬೆಲ್ಲ ಮಾಹಿತಿ ಪಡೆದು ಬಳಿಕ ನಗ್ನ ಚಿತ್ರ ಕಳುಹಿಸುವಂತೆ ಕೇಳಿದ್ದ ಎಂದಿದ್ದಾರೆ.
‘ಇದೂ ಸಹ ಸೈಬರ್ ಅಪರಾಧದ ಒಂದು ಭಾಗ. ಕೆಲ ಪ್ರಕರಣಗಳಲ್ಲಿ ಸುಲಿಗೆಯೂ ನಡೆದಿದೆ. ಈ ರೀತಿ ಹಲವು ಪ್ರಕರಣಗಳಿವೆ. ಕೆಲ ಪ್ರಕರಣಗಳಲ್ಲಿ ಸಂತ್ರಸ್ತರು ಜೀವ ಕಳೆದುಕೊಂಡಿದ್ದಾರೆ’ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
'ಶಾಲೆಯಲ್ಲಿ ನಾವು ಇತಿಹಾಸ ಮತ್ತು ಗಣಿತವನ್ನು ಕಲಿಯುತ್ತೇವೆ. ಎರಡು ಪ್ಲಸ್ ಎರಡು ನಾಲ್ಕು ಎಂದು ಕಲಿಯುತ್ತೇವೆ. ಆದರೆ, ಸೈಬರ್ ಜಗತ್ತಿನಲ್ಲಿ ನಾಲ್ಕು ಶೂನ್ಯವಾಗಬಹುದು. ನಮ್ಮ ಮಕ್ಕಳು ಇದನ್ನೆಲ್ಲಾ ಕಲಿಯಬೇಕು ಎಂದಿದ್ದಾರೆ.
ಮಹಾರಾಷ್ಟ್ರದ ಶಾಲೆಗಳಲ್ಲಿ 7ರಿಂದ 10ನೇ ತರಗತಿಯವರೆಗೆ ಸೈಬರ್ ಸುರಕ್ಷತೆಯ ಕುರಿತು ವಾರಕ್ಕೊಮ್ಮೆ ಕ್ಲಾಸ್ ಇರಬೇಕು ಎಂದು ನಾನು ಮುಖ್ಯಮಂತ್ರಿಯವರಿಗೆ ವಿನಂತಿಸಿಕೊಳ್ಳುತ್ತೇನೆ. ಸೈಬರ್ ಅಪರಾಧವು ಬೀದಿ ಅಪರಾಧಕ್ಕಿಂತ ದೊಡ್ಡದಾಗಿದೆ ಮತ್ತು ನಾವು ಅದನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.