ADVERTISEMENT

67 ಕೋಟಿ ಜನರ ವೈಯಕ್ತಿಕ ಮಾಹಿತಿ ಕಳವು, ಮಾರಾಟ ಆರೋಪ: ವ್ಯಕ್ತಿ ಬಂಧನ

ಸೈಬರಾಬಾದ್‌ ಪೊಲೀಸರ ಕಾರ್ಯಾಚರಣೆ * ಇಬ್ಬರು ಆರೋಪಿಗಳಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 12:50 IST
Last Updated 2 ಏಪ್ರಿಲ್ 2023, 12:50 IST
-
-   

ಹೈದರಾಬಾದ್: ದೇಶದಾದ್ಯಂತ 67 ಕೋಟಿಯಷ್ಟು ಜನರ ವೈಯಕ್ತಿಕ ಹಾಗೂ ಗೌಪ್ಯ ಮಾಹಿತಿಯನ್ನು ಕಳವು ಮಾಡಿ, ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಸೈಬರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

ವಿನಯ್‌ ಭಾರದ್ವಾಜ್‌ ಬಂಧಿತ ಆರೋಪಿ. ಈತನಿಗೆ ಜನರ ವೈಯಕ್ತಿಕ ಹಾಗೂ ಗೌಪ್ಯ ಮಾಹಿತಿ ಒದಗಿಸುತ್ತಿದ್ದ ಆರೋಪಿಗಳಾದ ಅಮೀರ್‌ ಸೊಹೇಲ್‌ ಹಾಗೂ ಮದನಗೋಪಾಲ್‌ ಎಂಬುವವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಡಿಸಿಪಿ (ಕ್ರೈಮ್ಸ್) ಕಲ್ಮೇಶ್ವರ ಶಿಗೇನವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಯಾರ ಮಾಹಿತಿ ಕಳ್ಳತನ–ಮಾರಾಟ: ಹರಿಯಾಣದ ಫರೀದಾಬಾದ್‌ನಲ್ಲಿ ಆರೋಪಿಯು ‘ಇನ್ಸ್‌ಪೈರ್ ವೆಬ್ಜ್’ ಎಂಬ ವೆಬ್‌ಸೈಟ್‌ ಮೂಲಕ ಈ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಡಿಸಿಪಿ ಕಲ್ಮೇಶ್ವರ ಶಿಗೇನವರ ಹೇಳಿದ್ದಾರೆ.

ADVERTISEMENT

‘ಬೈಜೂಸ್‌ ಹಾಗೂ ವೇದಾಂತದ ವಿದ್ಯಾರ್ಥಿಗಳ ಮಾಹಿತಿಯನ್ನು ವಿನಯ್‌ ಹೊಂದಿದ್ದ. ದೇಶದ ಎಂಟು ಮಹಾನಗರಗಳಲ್ಲಿನ 1.84 ಲಕ್ಷ ಕ್ಯಾಬ್‌ ಬಳಕೆದಾರರು, ಆರು ಮಹಾನಗರಗಳು ಹಾಗೂ ಗುಜರಾತ್‌ ರಾಜ್ಯ ಸೇರಿ 4.5 ಲಕ್ಷ ಉದ್ಯೋಗಿಗಳ ಮಾಹಿತಿಯನ್ನೂ ಆರೋಪಿ ಹೊಂದಿದ್ದ’ ಎಂದು ಹೇಳಿದ್ದಾರೆ.

ಜಿಎಸ್‌ಟಿ ಪಾವತಿಸುವವರು, ಆರ್‌ಟಿಒ ಕಚೇರಿ, ಅಮೆಜಾನ್, ನೆಫ್‌ಫ್ಲಿಕ್ಸ್, ಯೂಟ್ಯೂಬ್, ಪೇಟಿಯಂ, ಫೋನ್‌ಪೆ, ಬಿಗ್‌ಬ್ಯಾಸ್ಕೆಟ್, ಬುಕ್‌ಮೈಶೋ, ಇನ್‌ಸ್ಟಾಗ್ರಾಮ್, ಜೊಮಾಟೊ, ಪಾಲಿಸಿಬಜಾರ್, ಅಪ್‌ಸ್ಟಾಕ್ಸ್ ಸೇರಿದಂತೆ ಹಲವಾರು ಕಂಪನಿಗಳ ಗ್ರಾಹಕರ ಮಾಹಿತಿಯನ್ನು ವಿನಯ್‌ ಹೊಂದಿದ್ದ ಎಂದು ತಿಳಿಸಿದ್ದಾರೆ.

‘ರಕ್ಷಣಾ ಇಲಾಖೆ ಸಿಬ್ಬಂದಿ, ಪ್ಯಾನ್‌ ಕಾರ್ಡ್‌ ಹೊಂದಿರುವವರು, ವಿವಿಧ ರಾಜ್ಯಗಳಲ್ಲಿನ 9,10,11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳು, ದೆಹಲಿ ವಿದ್ಯುತ್‌ ಕಂಪನಿಗಳ ಗ್ರಾಹಕರು, ಡಿಮ್ಯಾಟ್‌ ಖಾತೆ ಹೊಂದಿರುವವರು, ಹಲವಾರು ಮಂದಿಯ ಮೊಬೈಲ್ ನಂಬರ್‌ಗಳು, ವಿಮಾ ಪಾಲಿಸಿ ಹೊಂದಿರುವವರ ವೈಯಕ್ತಿಕ ಮಾಹಿತಿಯೂ ವಿನಯ್‌ ಬಳಿ ಇತ್ತು. ಕಾರುಗಳನ್ನು ಹೊಂದಿರುವವರು, ಉದ್ಯೋಗಾಕಾಂಕ್ಷಿಗಳು ಹಾಗೂ ಅನಿವಾಸಿ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಕೂಡ ಕಳವು ಮಾಡಿ, ಮಾರಾಟ ಮಾಡುತ್ತಿದ್ದ’ ಎಂದು ತಿಳಿಸಿದ್ದಾರೆ.

‘ವಿವಿಧ ಬ್ಯಾಂಕುಗಳ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್ ಬಳಕೆದಾರರು, ನೀಟ್ ವಿದ್ಯಾರ್ಥಿಗಳಿಗೆ ಸೇರಿದ ಮಾಹಿತಿಯ ಕಳವು ಮತ್ತು ಮಾರಾಟದಲ್ಲಿ ನಿರತವಾಗಿದ್ದ ಗುಂಪನ್ನು ಇತ್ತೀಚೆಗೆ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಯಿತು. ಈ ಗುಂಪು, ಮಾಹಿತಿಯನ್ನು ಜಸ್ಟ್‌ಡಯಲ್‌ ಹಾಗೂ ಇದೇ ರೀತಿಯ ಇತರ ವೇದಿಕೆಗಳ ಮೂಲಕ ಮಾರಾಟ ಮಾಡುತ್ತಿತ್ತು. ಈ ಜಾಡನ್ನು ಹಿಡಿದು ತನಿಖೆ ಕೈಗೊಂಡಾಗ ವಿನಯ್ ಭಾರದ್ವಾಜ್‌ನ ಕೃತ್ಯವೂ ಬೆಳಕಿಗೆ ಬಂತು’ ಎಂದು ಹೇಳಿದ್ದಾರೆ.

‘ಆರೋಪಿಯು 104 ವಿಭಾಗಗಳಿಗೆ ಸಂಬಂಧಿಸಿದ 66.9 ಕೋಟಿಗೂ ಅಧಿಕ ಜನರ ವೈಯಕ್ತಿಕ ಮಾಹಿತಿಯನ್ನು ನಿರ್ವಹಣೆ ಮಾಡುತ್ತಿದ್ದ’ ಎಂದಿದ್ದಾರೆ.

‘ಕಳ್ಳತನ ಹಾಗೂ ಮಾರಾಟ ಮಾಡುತ್ತಿದ್ದ ಮಾಹಿತಿಯ ಪ್ರಮಾಣ ಅಗಾಧವಾದುದು. ಈ ಮಾಹಿತಿಯನ್ನು ಸೈಬರ್‌ ಅಪರಾಧಗಳು, ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಕರೆಗಳು ಹಾಗೂ ಜಾಹೀರಾತಿಗಾಗಿ ಬಳಕೆ ಮಾಡಲಾಗುತ್ತಿತ್ತು. ಇದು ತಂದು ಒಡ್ಡಿರುವ ಅಪಾಯ ದೊಡ್ಡಮಟ್ಟದ್ದೇ ಇದ್ದು, ತನಿಖೆಯಿಂದ ಗೊತ್ತಾಗಲಿದೆ’ ಎಂದು ಡಿಸಿಪಿ ಶಿಗೇನವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.