ADVERTISEMENT

ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ: ಒಡಿಶಾದಲ್ಲೂ ಭಾರಿ ಮಳೆ

ಪಿಟಿಐ
Published 28 ಅಕ್ಟೋಬರ್ 2025, 17:42 IST
Last Updated 28 ಅಕ್ಟೋಬರ್ 2025, 17:42 IST
<div class="paragraphs"><p>ಮೊಂಥಾ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ ಪುರಿಯ ಕಡಲತೀರದಲ್ಲಿ ಮೀನುಗಾರಿಕೆ ದೋಣಿಗಳು ದಡ ಸೇರಿದ ದೃಶ್ಯ</p></div>

ಮೊಂಥಾ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ ಪುರಿಯ ಕಡಲತೀರದಲ್ಲಿ ಮೀನುಗಾರಿಕೆ ದೋಣಿಗಳು ದಡ ಸೇರಿದ ದೃಶ್ಯ

   

ಪಿಟಿಐ ಚಿತ್ರ

ಅಮರಾವತಿ/ಭುವನೇಶ್ವರ: ಮೊಂಥಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಪ್ರದೇಶದ ಮಚಲಿಪಟ್ಟಣ ಮತ್ತು ಕಾಕಿನಾಡ ನಡುವೆ ಮಂಗಳವಾರ ರಾತ್ರಿ 7ರ ಹೊತ್ತಿಗೆ ಅಪ್ಪಳಿಸಿದೆ. ಈ ವೇಳೆ ಗಾಳಿಯ ವೇಗವು ಗಂಟೆಗೆ 110 ಕಿ.ಮೀನಷ್ಟು ಇತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

‘ರಾತ್ರಿ 7.23ರ ಸುಮಾರಿಗೆ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ನಂತರದ 3–4 ತಾಸು ಮುಂದುವರಿದಿದೆ’ ಎಂದು ಇಲಾಖೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾದ ಮೇಲೆಯೇ ಚಂಡ ಮಾರುತವು ಹೆಚ್ಚು ಪರಿಣಾಮ ಬೀರಲಿದೆ.

‘ಯಾವುದೇ ಸಾವು ನೋವು ಸಂಭವಿಸದಂತೆ ನೋಡಿಕೊಳ್ಳುವುದೇ ಸರ್ಕಾರದ ಗುರಿ’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್‌ ಚರಣ್ ಮಾಂಝಿ ಹೇಳಿದರು. ತೀವ್ರ ಮಳೆಯಾಗುವ ಪ್ರದೇಶಗಳು, ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಈ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಶಾಲೆಗಳು, ಅಂಗನ ವಾಡಿ‌ಗಳಿಗೆ ಅ.30ರವರೆಗೆ ಇಲ್ಲಿ ರಜೆ ಘೋಷಿಸಲಾಗಿದೆ.

ಆಂಧ್ರದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಸುರಿದಿದೆ. ಒಡಿಶಾದ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮೊಂಥಾ ಪರಿಣಾಮವು  ರಾಜಸ್ಥಾನದವರೆಗೂ ಹಬ್ಬಿಕೊಂಡಿದ್ದು, ಬೂಂದಿ ಜಿಲ್ಲೆಯಲ್ಲಿ 13 ಸೆಂ.ಮೀ ಮಳೆ ಸುರಿದಿದೆ. ಅ.13ರಂದು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಂಧ್ರದಲ್ಲಿ ಬೆಳೆ ನಾಶ: ‘ತೀವ್ರ ಮಳೆಯ ಕಾರಣ ಆಂಧ್ರಪ್ರದೇಶದ 38 ಸಾವಿರ ಹೆಕ್ಟೇರ್‌ ವಿಸ್ತೀರ್ಣದಲ್ಲಿ
ಬೆಳೆ ನಾಶವಾಗಿದೆ ಮತ್ತು 1.38 ಲಕ್ಷ ಹೆಕ್ಟೇರ್‌ ನಲ್ಲಿನ ತೋಟಗಾರಿಕಾ ಬೆಳೆ ನಾಶವಾಗಿದೆ’ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಮಹಿಳೆ ಸಾವು

ವೇಗವಾಗಿ ಬೀಸುತ್ತಿರುವ ಗಾಳಿಯ ಕಾರಣದಿಂದ ತಲೆಯ ಮೇಲೆ ಮರವೊಂದು ಬಿದ್ದು ಆಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.

ಜನರನ್ನು ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸುವ ಕಾರ್ಯ ನಿರ್ವಹಿಸುತ್ತಿದ್ದ ಒಡಿಶಾದ ಗಜಪತಿ ಜಿಲ್ಲೆಯ ಸರ್ಕಾರಿ ನೌಕರ ಸುರೇಂದ್ರ ಗಮಂಗ್‌ ಎಂಬವರು ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದಾರೆ. ಸಾವಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ. 

ಒಡಿಶಾ: ಭೂಕುಸಿತ

‘ಮೊಂಥಾ’ದಿಂದ ಒಡಿಶಾದ ಕರಾವಳಿ ಮತ್ತು ದಕ್ಷಿಣ ಭಾಗದ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿದೆ. ಹಲವು ಮರಗಳು ಧರೆಗೆ ಉರುಳಿದ್ದು, ಕೆಲವು ಮನೆಗಳು ನೆಲಸಮವಾಗಿವೆ.

ಗಜಪತಿ ಜಿಲ್ಲೆಯ ಅನಕ ಗ್ರಾ.ಪಂ.ನಲ್ಲಿ ಗುಡ್ಡಗಳಿಂದ ದೊಡ್ಡ ಗಾತ್ರದ ಬಂಡೆಗಳು ರಸ್ತೆಗೆ ಉರುಳಿವೆ. ಇದರಿಂದ ಈ ಭಾಗದ ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದೇ ಜಿಲ್ಲೆಯ ಮತ್ತೊಂದು ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಭೂಕುಸಿತ ವಾಗಿದೆ. ಇದೇ ಜಿಲ್ಲೆಯಲ್ಲಿ ಮಣ್ಣಿನ ಮನೆಯೊಂದು ಕುಸಿದು ಬಿದ್ದು, ವ್ಯಕ್ತಿಗೆ ಗಾಯವಾಗಿದೆ.

ಒಡಿಶಾದ 8 ಜಿಲ್ಲೆಗಳಲ್ಲಿ ಹೈ ಅಲರ್ಟ್

ಒಡಿಶಾದ ದಕ್ಷಿಣ ಭಾಗದ 8 ಜಿಲ್ಲೆಗಳಲ್ಲಿ ಮೊಂಥಾ ಚಂಡಮಾರುತದಿಂದಾಗಿ ಭಾರೀ ಮಳೆಯಾಗಿದೆ. 

ಮಾಲ್ಕನ್‌ಗಿರಿ, ಕೋರಾಟಪೂಟ್, ರಾಯಗಡ, ಗಜಪತಿ, ಗಂಜಾಂ, ನಬರಂಗ್‌ಪುರ, ಕಲಾಹಂಡಿ ಮತ್ತು ಕಂಧಮಲ್‌ನಲ್ಲಿ ವ್ಯಾಪಕ ಮಳೆಯಾಗಿದೆ. 

ರಾಜ್ಯದಲ್ಲಿ ಸುಮಾರು 1,400 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶದಲ್ಲಿರುವವರ ಸ್ಥಳಾಂತರ ತ್ವರಿತಗತಿಯಲ್ಲಿ ಸಾಗಿದೆ. ಶಾಲೆ ಹಾಗೂ ಶಿಶುವಿಹಾರಗಳಿಗೆ ಅ. 30ರವರೆಗೂ ರಜೆ ನೀಡಲಾಗಿದೆ. ಕಡಲತೀರಗಳಿಗೆ ತೆರಳದಂತೆ ನಿರ್ಬಂಧಿಸಲಾಗಿದೆ. ಅ. 29ರವರೆಗೂ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮೊಂಥಾ ಚಂಡಮಾರುತದಿಂದ ಜಾರ್ಖಂಡ್‌ನಲ್ಲೂ ಭಾರೀ ಮಳೆ

ಬಂಗಳಾಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತದಿಂದ ಜಾರ್ಖಂಡ್‌ನಲ್ಲೂ ಅ. 31ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸಿಮ್‌ದೆಗಾ, ಪಶ್ಚಿಮ ಸಿಂಗ್‌ಭುಮ್‌, ಖುಂತಿ, ಗುಮ್ಲಾದಲ್ಲಿ ಅ. 28ರವರೆಗೆ, ಛಾತ್ರಾ, ಗರ್ವಾ, ಲಟೆಹರ್‌, ಪಲಾಮುನಲ್ಲಿ ಅ. 29ರವರೆಗೆ ಹಾಗೂ ಅ. 30ರಿಂದ 31ರವರೆಗೆ 

ಮೊಂಥಾ ಚಂಡಮಾರುತವು ಆಂಧ್ರ ತೀರದ ಕಾಕಿನಾಡ ಮೂಲಕ ಪ್ರತಿ ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಸಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಚಂಡಮಾರುತಕ್ಕೆ ಥಾಯ್ಲೆಂಡ್‌ ನೀಡಿರುವ ‘ಮೊಂಥಾ’ ಹೆಸರನ್ನು ಇಡಲಾಗಿದೆ. ಮೊಂಥಾ ಎಂದರೆ ಸುಂದರ ಹೂವು ಅಥವಾ ಸುವಾಸನಾಭರಿತ ಹೂವು ಎಂದರ್ಥ.

ರೈಲು, ವಿಮಾನ ಹಾರಾಟ ರದ್ದು

ಚಂಡಮಾರುತದ ಎಚ್ಚರಿಕೆ ಇರುವುದರಿಂದ ಒಡಿಶಾದಲ್ಲಿ 32 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಆಂಧ್ರಪ್ರದೇಶದ ಗನ್ನಾವರಮ್ ವಿಮಾನ ನಿಲ್ದಾಣದಿಂದ ಮಂಗಳವಾರ ಹಾರಾಟ ನಡಸಬೇಕಿದ್ದ 30 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.