ಟಿಬೆಟಿಯನ್ ಧರ್ಮಗುರು ದಲೈ ಲಾಮಾ ತಮ್ಮ ಹುಟ್ಟಹಬ್ಬ ಆಚರಣೆಯ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿದರು
(ಚಿತ್ರ: ನಿಹಾರಿಕಾ ಕುಲಕರ್ಣಿ / ಎಎಫ್‌ಪಿ)
ಧರ್ಮಶಾಲಾ: ಭಾರಿ ಮಳೆಯ ನಡುವೆಯೂ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ 90ನೇ ಹುಟ್ಟುಹಬ್ಬವನ್ನು ತ್ಸುಗ್ಲಾಖಾಂಗ್ ದೇವಾಲಯದ ಮುಂಭಾಗ ಸೇರಿದ ಸಾವಿರಾರು ಜನರು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಟಿಬೆಟಿಯನ್ ಬೌದ್ಧ ಪಂಗಡಗಳ ಪ್ರತಿನಿಧಿಗಳು, ಶಾಲಾ ಮಕ್ಕಳು, ವಿವಿಧ ದೇಶಗಳ ನರ್ತಕರು ಮತ್ತು ಗಾಯಕರು ಭಾಗವಹಿಸಿದ್ದರು.
ಭಾರತ, ಅಮೆರಿಕ, ತೈವಾನ್ ಸೇರಿದಂತೆ ಜಾಗತಿಕ ನಾಯಕರು ಅವರಿಗೆ ಶುಭಾಶಯ ಕೋರಿದ್ದು, ಟಿಬೆಟಿಯನ್ ಜನರಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಅಮೆರಿಕದ ಶುಭಾಶಯಗಳನ್ನು ತಿಳಿಸಿ, ‘ಟಿಬೆಟಿಯನ್ನರ ಮೂಲಭೂತ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಪರವಾಗಿ ದೃಢವಾಗಿ ನಿಲ್ಲುತ್ತದೆ’ ಎಂದು ಒತ್ತಿ ಹೇಳಿದ್ದಾರೆ.
ಚೀನಾಗೆ ತಿರುಗೇಟು ನೀಡಿರುವ ಅವರು, ತಮ್ಮ ಧಾರ್ಮಿಕ ನಾಯಕರ ಆಯ್ಕೆಯು ಟಿಬೆಟಿಯನ್ನರ ಹಕ್ಕು ಎಂದು ಹೇಳಿದ್ದಾರೆ. ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆಗೆ ತನ್ನ ಒಪ್ಪಿಗೆ ಬೇಕು ಮತ್ತು ಅದು ತನ್ನ ನೆಲದಲ್ಲೆ ನಡೆಯಬೇಕು ಎಂದು ಚೀನಾ ತಾಕೀತು ಮಾಡಿತ್ತು.
ತನ್ನ ಪ್ರದೇಶ ಎಂದು ಚೀನಾ ಪ್ರತಿಪಾದಿಸುವ ತೈವಾನ್ ಕೂಡಾ ದಲೈ ಲಾಮಾ ಅವರಿಗೆ ಶುಭಾಶಯ ಕೋರಿದ್ದು, ಅದರ ಅಧ್ಯಕ್ಷ ಲೈ ಚಿಂಗ್, ‘ತೈವಾನ್‌ನಲ್ಲಿ ತೀವ್ರವಾಗಿ ಪ್ರತಿಧ್ವನಿಸುವ ಮೌಲ್ಯಗಳಾದ ಶಾಂತಿ ಮತ್ತು ಮಾನವ ಹಕ್ಕುಗಳಿಗಾಗಿ ನೀವು ಮಾಡುವ ಸಮರ್ಪಿತ ಕೆಲಸಕ್ಕಾಗಿ ಶ್ಲಾಘನೆ ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದ್ದಾರೆ.
ಅಮೆರಿಕದ ಮೂವರು ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ, ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಡಬ್ಲು ಬುಷ್ ಅವರು ಕೂಡಾ ದಲೈ ಲಾಮಾ ಅವರಿಗೆ ವಿಡಿಯೊ ಮೂಲಕ ಶುಭಾಶಯ ಕೋರಿದ್ದಾರೆ.
ದಲೈ ಲಾಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ. ಅವರು ಪ್ರೀತಿ ಕರುಣೆ ತಾಳ್ಮೆ ಮತ್ತು ನೈತಿಕ ಶಿಸ್ತಿನ ಶಾಶ್ವತ ಸಂಕೇತವಾಗಿದ್ದಾರೆ. ಅವರ ಆರೋಗ್ಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ–ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಧಾನಿ
ನವದೆಹಲಿ: ದಲೈ ಲಾಮಾ ಅವರ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಶುಭಾಶಯ ಕೋರಿದೆ. 1959ರ ಏಪ್ರಿಲ್ 24ರಂದು ಜವಾಹರಲಾಲ್ ನೆಹರೂ ಮತ್ತು ದಲೈ ಲಾಮಾ ಅವರು ಮುಸ್ಸೋರಿಯಲ್ಲಿ ನಡೆಸಿದ್ದ ನಾಲ್ಕು ಗಂಟೆಗಳ ಮಾತುಕತೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದೆ. ಈ ವೇಳೆ ವಿದೇಶಾಂಗ ಕಾರ್ಯದರ್ಶಿ ಸುಬಿಮಲ್ ದತ್ತ್ ಮತ್ತು ದುಭಾಷಿಗಳು ಮಾತ್ರ ಉಪಸ್ಥಿತರಿದ್ದರು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ದಲೈ ಲಾಮಾ 1959ರ ಮಾರ್ಚ್ 31ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅದರ ನಂತರ ಅವರು ದೇಶದಾದ್ಯಂತ ವಿಸ್ತೃತ ಪ್ರವಾಸ ಕೈಗೊಂಡರು. ನಂತರ ಧರ್ಮಶಾಲೆಯಲ್ಲಿ ಅವರ ಸಂಸ್ಥೆ ಸ್ಥಾಪನೆಯಾಯಿತು. ತದನಂತರ ಬೈಲಕುಪ್ಪೆ ಮುಂಡಗೋಡ್ ಮತ್ತು ಹುಣಸೂರಿನಂತಹ ವಿವಿಧ ಪ್ರದೇಶಗಳಲ್ಲಿ ಟಿಬೆಟಿಯನ್ ನೆಲೆಗಳು ಆರಂಭವಾದವು ಎಂದು ಜೈರಾಮ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.