ದಲೈ ಲಾಮಾ
ನವದೆಹಲಿ: ಟಿಬೆಟ್‌ನ ಬೌದ್ಧ ಧರ್ಮೀಯರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ 90ನೇ ವರ್ಷದ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶುಭಾಶಯ ಕೋರಿದ್ದಾರೆ.
ಆಧ್ಯಾತ್ಮಿಕ ಗುರು ದಲೈ ಲಾಮಾ ಅವರು ಪ್ರೀತಿ, ಕರುಣೆ, ತಾಳ್ಮೆ ಮತ್ತು ನೈತಿಕ ಶಿಸ್ತಿನ ಶಾಶ್ವತ ಸಂಕೇತವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
140 ಕೋಟಿ ಭಾರತೀಯರೊಂದಿಗೆ ನಾನೂ ದಲೈ ಲಾಮಾ ಅವರ 90ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತೇನೆ. ಅವರ ಸಂದೇಶ ಸರ್ವ ಧರ್ಮಗಳಲ್ಲಿ ಗೌರವ ಮತ್ತು ಮೆಚ್ಚುಗೆ ಪಾತ್ರವಾಗಿದೆ. ಅವರಿಗೆ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜನ್ಮದಿನಕ್ಕೂ ಮುನ್ನಾ ದಿನ ಧರ್ಮಶಾಲದ ಮೆಕ್ಲೌಡ್ ಗಾಂಜ್ ದೇವಾಲಯದಲ್ಲಿ ಶನಿವಾರ ದೀರ್ಘಾಯುಸ್ಸಿಗಾಗಿ ಹಮ್ಮಿಕೊಂಡಿರುವ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ‘ನಾನು ಅನೇಕ ಭವಿಷ್ಯವಾಣಿಗಳನ್ನು ನೋಡಿದ್ದೇನೆ. ನನಗೆ ಅವಲೋಕಿತೇಶ್ವರ (ಬೌದ್ಧ ಧರ್ಮದ ಪ್ರಕಾರ, ವಿಶ್ವದ ದೇವರು) ಅವರ ಆಶೀರ್ವಾದ ಇದೆ ಎಂದು ನಂಬಿದ್ದೇನೆ. ಇದುವರೆಗೂ ನಾನು ಅತ್ಯುತ್ತಮ ಕೆಲಸಗಳನ್ನು ಮಾಡಿದ್ದೇನೆ. ಇನ್ನೂ 30ರಿಂದ 40 ವರ್ಷ ಬದುಕಲಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ಎಲ್ಲವೂ ಸಾಧ್ಯವಾಗಿದೆ’ ಎಂದರು.
ಬಾಲ್ಯದಿಂದಲೂ ಅವಲೋಕಿತೇಶ್ವರರ ಜೊತೆಗೆ ಬಲವಾದ ಸಂಬಂಧ ಹೊಂದಿರುವುದು ನನಗೆ ಅನುಭವಕ್ಕೆ ಬಂದಿದೆ. ಆದ್ದರಿಂದಲೇ ಬೌದ್ಧ ಧರ್ಮದ ಸೇವೆ ಮಾಡುತ್ತಿದ್ದು, ಟಿಬೆಟ್‌ನ ಪರಿಸ್ಥಿತಿಯಲ್ಲಿಯೂ ಸುಧಾರಿಸಿದೆ. ಈಗಲೂ ನಾನು 130 ವರ್ಷದವರೆಗೂ ಬದುಕಲಿದ್ದೇನೆ ಎಂದು ನಂಬಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.