
ಭದೋಹಿ (ಉತ್ತರ ಪ್ರದೇಶ): ಕಾಲುವೆಯ ಬಳಿ ಬಯಲು ಬಹಿರ್ದೆಸೆ ಮಾಡುತ್ತಿದ್ದ ದಲಿತ ಯುವಕನ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಜತೆಗೆ, ಬೈಕ್‌ನ ಕೀಯಿಂದ ಕಣ್ಣಿಗೆ ಚುಚ್ಚಿದ್ದರಿಂದ ದಲಿತ ಯುವಕ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಹಲ್ಲೆಗೊಳಗಾಗಿದ್ದ 20 ವರ್ಷದ ರಾಹುಲ್‌ನನ್ನು ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಔರೈ ಪ್ರದೇಶದ ಕಾಲುವೆ ಬಳಿ ಶುಕ್ರವಾರ ಮಧ್ಯಾಹ್ನ ರಾಹುಲ್ ಬಯಲು ಬಹಿರ್ದೆಸೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾಲುವೆಯ ಬಳಿ ಬಯಲು ಬಹಿರ್ದೆಸೆ ಮಾಡುವುದನ್ನು ಆರೋಪಿ ಶಂಕರ್ ಬಿಂದ್ ವಿರೋಧಿಸಿದ್ದ. ಇದೇ ವಿಚಾರಕ್ಕೆ ರಾಹುಲ್–ಶಂಕರ್ ನಡುವೆ ಮಾತಿನ ಚಕಮಕಿಯೂ ನಡೆದಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.
‘ಜಾತಿ ಆಧರಿಸಿ ರಾಹುಲ್‌ನನ್ನು ಶಂಕರ್ ಮನಬಂದಂತೆ ನಿಂದಿಸಿದ್ದ, ಬಳಿಕ ಗಂಭಿರವಾಗಿ ಹಲ್ಲೆಯೂ ನಡೆಸಿದ್ದ. ರಾಹುಲ್ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ಆರೋಪಿಯು ಬೈಕ್ ಕೀಯಿಂದ ಎಡಗಣ್ಣಿಗೆ ಚುಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ಹೇಳಿದ್ದಾರೆ.
‘ಘಟನೆಯಲ್ಲಿ ರಾಹುಲ್ ಎಡಗಣ್ಣಿಗೆ ತೀವ್ರ ಗಾಯವಾಗಿದ್ದು, ದೃಷ್ಟಿ ಕಳೆದುಕೊಂಡಿದ್ದಾರೆ. ರಾಹುಲ್ ತಂದೆ ರಾಮ್ ಧನಿ ನೀಡಿದ ದೂರಿನ ಆಧರಿಸಿ ಆರೋಪಿ ಶಂಕರ್ ಬಿಂದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.