ADVERTISEMENT

ಭಾರತ–ಚೀನಾ ಯುದ್ಧದ ವೇಳೆ 600KG ಚಿನ್ನ ನೀಡಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನ

ಏಜೆನ್ಸೀಸ್
Published 15 ಜನವರಿ 2026, 9:02 IST
Last Updated 15 ಜನವರಿ 2026, 9:02 IST
<div class="paragraphs"><p>ಮಹಾರಾಣಿ&nbsp;ಕಾಮಸುಂದರಿ ದೇವಿ</p></div>

ಮಹಾರಾಣಿ ಕಾಮಸುಂದರಿ ದೇವಿ

   

ಚಿತ್ರ: ಎಕ್ಸ್‌

ದರ್ಭಾಂಗ: ಬಿಹಾರದ ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ ಅವರು ಜ.12ರಂದು ನಿಧನರಾಗಿದ್ದಾರೆ. 

ADVERTISEMENT

ಅವರಿಗೆ 96 ವರ್ಷ ವಯಸ್ಸಾಗಿತ್ತು. ರಾಜಮನೆತನದ ಸದಸ್ಯರಿಗೆ ಸಾಂಪ್ರದಾಯಿಕವಾಗಿ ನಡೆಯುವಂತೆಯೇ ಶ್ಯಾಮಾ ಮಾಯಿ ದೇವಾಲಯ ಸಂಕೀರ್ಣದಲ್ಲಿ ಮಹಾರಾಣಿಯವರ ಅಂತ್ಯಕ್ರಿಯೆ ನಡೆದಿದೆ. 

ಕಳೆದ ಆರು ತಿಂಗಳಿಂದ ಮಹಾರಾಣಿಯವರು ಅನಾರೋಗ್ಯಕ್ಕೀಡಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

1932ರ ಅಕ್ಟೋಬರ್ 22 ರಂದು ಕಾಮಸುಂದರಿ ದೇವಿ ಜನಿಸಿದ್ದರು. ಅವರಿಗೆ ಎಂಟು ವರ್ಷವಿದ್ದಾಗ 1940ರಲ್ಲಿ ಮಹಾರಾಜ ಕಾಮೇಶ್ವರ ಸಿಂಗ್‌ ಜತೆಗೆ ವಿವಾಹವಾಗಿತ್ತು. ಮಹಾರಾಜರ ಮೂರನೇ ಪತ್ನಿಯಾಗಿ ದರ್ಭಾಂಗ ರಾಜಮನೆತನಕ್ಕೆ ಸೇರಿಕೊಂಡಿದ್ದರು.

1962ರಲ್ಲಿ ಮಹಾರಾಜ ಸಿಂಗ್ ಮೃತಪಟ್ಟಿದ್ದರು. ನಂತರ ಕಾಮಸುಂದರಿ ದೇವಿಯವರು ಮಹಾರಾಜರ ನೆನಪಿಗಾಗಿ ಕಲ್ಯಾಣಿ ಫೌಂಡೇಶನ್‌ ಸ್ಥಾಪಿಸಿದ್ದರು. ಅದರ ಮೂಲಕ ಮಹಾರಾಜರ ಹೆಸರಿನಲ್ಲಿ ಗ್ರಂಥಾಲಯ ತೆರೆದು 15 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇರಿಸಿದ್ದರು. ಅಲ್ಲದೆ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿಗೂ ಕೊಡುಗೆಗಳನ್ನು ನೀಡಿದ್ದಾರೆ.

ಭಾರತ–ಚೀನಾ ಯುದ್ಧದ ವೇಳೆ 600 ಕೆ.ಜಿ ಚಿನ್ನ ನೀಡಿದ್ದ ಮಹಾರಾಣಿ

1962 ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ದರ್ಭಾಂಗ ರಾಜಮನೆತನ ನೀಡಿದ ನೆರವನ್ನು ಭಾರತ ಎಂದಿಗೂ ಮರೆಯದು. ಸರ್ಕಾರ ಸಹಾಯಕ್ಕೆ ಮನವಿ ಮಾಡುವ ಮೊದಲೇ ಸ್ಪಂದಿಸಿದ್ದ ಮಹಾರಾಣಿಯವರು ಇಂದ್ರಭವನ ಮೈದಾನದಲ್ಲಿ ರಾಷ್ಟ್ರ ರಕ್ಷಣೆಗಾಗಿ 15 ಮೌಂಡ್‌ಗಳು (ಸುಮಾರು 600 ಕೆಜಿ) ಚಿನ್ನವನ್ನು ದಾನ ಮಾಡಿದ್ದರು. ಜತೆಗೆ ಮೂರು ಖಾಸಗಿ ವಿಮಾನಗಳು ಮತ್ತು 90 ಎಕರೆ ವಾಯುನೆಲೆಯನ್ನು ಸರ್ಕಾರಕ್ಕೆ ವರ್ಗಾಯಿಸಿದ್ದರು. ನಂತರ ಈ ಸ್ಥಳವು ದರ್ಭಾಂಗ ವಿಮಾನ ನಿಲ್ದಾಣವಾಯಿತು.

ದರ್ಭಾಂಗ ರಾಜಮನೆತನದ ಕೊನೆ

ಮಹಾರಾಜ ಸಿಂಗ್ ಮೂರು ಮದುವೆಯಾದರೂ ಅವರಿಗೆ ಮಕ್ಕಳಾಗಲಿಲ್ಲ. ಹೀಗಾಗಿ ರಾಜಮನೆತನದ ಕೊನೆಯ ವ್ಯಕ್ತಿಯಾಗಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನರಾದ ಕಾರಣ ದರ್ಭಾಂಗ ರಾಜಮನೆತನವೂ ಕೊನೆಗೊಂಡಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.