ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಬೆಟ್ಟಗಳಲ್ಲಿ ನಿರಂತರ ಮಳೆಯಿಂದಾಗಿ ಹಲವೆಡೆ ಭೂಕುಸಿತಗಳು ಸಂಭವಿಸಿ, ಮನೆಗಳು ಕೊಚ್ಚಿ ಹೋಗಿವೆ. ರಸ್ತೆಗಳಿಗೆ ಹಾನಿಯಾಗಿದೆ. ದೂರದ ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಆಡಳಿತ, ಪೊಲೀಸರು ಮತ್ತು ವಿಪತ್ತು ಸ್ಪಂದನಾ ತಂಡಗಳಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಡಾರ್ಜಿಲಿಂಗ್ ಉಪ ವಿಭಾಗೀಯ ಅಧಿಕಾರಿ(ಎಸ್‌ಡಿಒ) ರಿಚರ್ಡ್ ಲೆಪ್ಚಾ ಪಿಟಿಐಗೆ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯು(ಎನ್‌ಡಿಆರ್‌ಎಫ್) ಅತ್ಯಂತ ಹಾನಿಗೊಳಗಾದ ವಲಯಗಳಲ್ಲಿ ಒಂದಾದ ಮಿರಿಕ್ ಸರೋವರ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತ ಸಂಗ್ರಹಿಸಿದ ವರದಿಗಳ ಪ್ರಕಾರ, ಇಲ್ಲಿಯವರೆಗೆ ಒಂಬತ್ತು ಮಂದಿಯ ಸಾವು ದೃಢಪಟ್ಟಿದೆ. ಆದರೆ, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
ಸರ್ಸಾಲಿ, ಜಸ್ಬಿರ್ಗಾಂವ್, ಮಿರಿಕ್ ಬಸ್ತಿ, ಧಾರ್ ಗಾಂವ್ (ಮೆಚಿ) ಮತ್ತು ಮಿರಿಕ್ ಸರೋವರ ಪ್ರದೇಶ ಸೇರಿದಂತೆ ಹಲವು ಸ್ಥಳಗಳಿಂದ ಸಾವುನೋವುಗಳು ವರದಿಯಾಗಿವೆ. ಧಾರ್ ಗಾಂವ್‌ನಲ್ಲಿ ಭಾರೀ ಮಣ್ಣು ಕುಸಿದು ಹಲವು ಮನೆಗಳು ನೆಲಸಮವಾಗಿವೆ.
ಮಿರಿಕ್-ಸುಖಿಯಾಪೋಖ್ರಿ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತದಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಬೆಟ್ಟದ ತುದಿಯಲ್ಲಿ ನೆಲೆಸಿರುವ ಜನರಿಗೆ ಸಂಪರ್ಕ ಕಂಡಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.