ನವದೆಹಲಿಯಲ್ಲಿ ನಡೆದ 'ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮಾವೇಶದಲ್ಲಿ ಅಮಿತ್ ಶಾ
ಪಿಟಿಐ
ನವದೆಹಲಿ: ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್‌ಲೈನ್ ಮಾರುಕಟ್ಟೆ ಮತ್ತು ಡ್ರೋನ್‌ಗಳು ದೇಶಕ್ಕೆ ಸವಾಲಾಗಿವೆ. ಕಠಿಣ ಕ್ರಮಗಳ ಮೂಲಕ ಇವುಗಳನ್ನು ನಿಗ್ರಹಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಗರದಲ್ಲಿ ನಡೆದ 'ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮಾವೇಶದಲ್ಲಿ ಮಾತನಾಡಿರುವ ಅಮಿತ್ ಶಾ, 'ದೇಶದ ಒಳಕ್ಕೆ ಅಥವಾ ಹೊರಕ್ಕೆ ಒಂದು ಕೆ.ಜಿ.ಯಷ್ಟೂ ಮಾದಕ ದ್ರವ್ಯ ಕಳ್ಳಸಾಗಣೆಯಾಗಲು ಬಿಡುವುದಿಲ್ಲ' ಎಂದು ಭರವಸೆ ನೀಡಿದ್ದಾರೆ.
'ಕೇಂದ್ರ ಸರ್ಕಾರವು ಮಾದಕವಸ್ತು ಜಾಲಗಳನ್ನು ನಿರ್ಮೂಲನೆ ಮಾಡುವುದಷ್ಟೇ ಅಲ್ಲದೆ, ಅವುಗಳೊಂದಿಗಿನ ಭಯೋತ್ಪಾದನೆ ನಂಟನ್ನೂ ಇಲ್ಲವಾಗಿಸುತ್ತಿದೆ. ಹಾಗೆಯೇ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಡ್ರಗ್ಸ್ – ಭಯೋತ್ಪಾದನೆ ಜಾಲಗಳನ್ನು ಬೇಧಿಸಲಾಗಿದೆ. ಇವೆಲ್ಲವೂ ಪ್ರಮುಖ ಸಾಧನೆಗಳಾಗಿವೆ' ಎಂದು ಪ್ರತಿಪಾದಿಸಿದ್ದಾರೆ.
'ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್‌ಲೈನ್ ಮಾರಾಟ ತಾಣಗಳು, ಡ್ರೋನ್‌ಗಳ ಬಳಕೆಯು ಇಂದಿಗೂ ಸವಾಲಾಗಿವೆ' ಎಂದು ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವ, 'ದೇಶದ ಭದ್ರತೆ ಮತ್ತು ಅಭಿವೃದ್ಧಿಯ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ತಂತ್ರಜ್ಞರು ಜಂಟಿಯಾಗಿ ಈ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕಿದೆ' ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾದಕವಸ್ತು ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ಬಂದಿದೆ ಎಂದು ಶ್ಲಾಘಿಸಿದ್ದಾರೆ.
'ಮಾದಕವಸ್ತುಗಳನ್ನು ವಶಕ್ಕೆ ಪಡೆದಿರುವ ಪ್ರಮಾಣವು ಕಳೆದ 10 ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗಿದೆ. ಇದು ಅತಿ ದೊಡ್ಡ ಸಾಧನೆಯಾಗಿದೆ. ಮೋದಿ ಸರ್ಕಾರವು, ಕಠಿಣ ಕ್ರಮಗಳ ಮೂಲಕ ಇಡೀ ಮಾದಕವಸ್ತು ಜಾಲವನ್ನೇ ನಾಶ ಮಾಡುವ ಕಠಿಣ ಸಂದೇಶ ರವಾನಿಸಿದೆ' ಎಂದಿದ್ದಾರೆ.
ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕವು (ಎನ್‌ಸಿಬಿ) 2024ರಲ್ಲಿ ಬರೋಬ್ಬರಿ ₹ 16,914 ಕೋಟಿ ಮೊತ್ತದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಶಾ ಮಾಹಿತಿ ನೀಡಿದ್ದಾರೆ.
'ಯುವ ಜನಾಂಗವು ಮಾದಕವಸ್ತುವಿನ ಚಟ ಅಂಟಿಸಿಕೊಂಡಿರುವ ಯಾವುದೇ ರಾಷ್ಟ್ರವೂ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯವಿಲ್ಲ. ಇದರ ವಿರುದ್ಧ ಒಂದಾಗಿ ಹೋರಾಟ ಮಾಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಕರೆ ನೀಡಿದ್ದಾರೆ.
'2004–14ರ ಯುಪಿಎ ಸರ್ಕಾರದ ಅವಧಿಯಲ್ಲಿ, ರಾಷ್ಟ್ರದಾದ್ಯಂತ 3.63 ಲಕ್ಷ ಕೆ.ಜಿ.ಯಷ್ಟು ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, 2014–24ರವರೆಗೆ (ಎನ್‌ಡಿಎ ಅವಧಿಯಲ್ಲಿ) 24 ಲಕ್ಷ ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಯುಪಿಎ ಅವಧಿಯಲ್ಲಿ ₹ 8,150 ಕೋಟಿಯಷ್ಟು ಹಾಗೂ ಎನ್‌ಡಿಎ ಅವಧಿಯಲ್ಲಿ ₹ 54,851 ಬೆಲೆಯ ಮಾದಕವಸ್ತುವನ್ನು ನಾಶ ಮಾಡಲಾಗಿದೆ' ಎಂದು ಲೆಕ್ಕ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.