ADVERTISEMENT

ಕಾಶ್ಮೀರದ ಸೇಬು ಕೀಟನಾಶಕಗಳಿಂದ ಕ್ಯಾನ್ಸರ್‌ ಪೀಡೆ!

​ಪ್ರಜಾವಾಣಿ ವಾರ್ತೆ
Published 4 ಮೇ 2025, 23:57 IST
Last Updated 4 ಮೇ 2025, 23:57 IST
ಕಾಶ್ಮೀರದ ಸೇಬಿನ ತೋಟವೊಂದರಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಹಣ್ಣುಗಳು –ಪಿಟಿಐ ಚಿತ್ರ
ಕಾಶ್ಮೀರದ ಸೇಬಿನ ತೋಟವೊಂದರಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಹಣ್ಣುಗಳು –ಪಿಟಿಐ ಚಿತ್ರ   

ಶ್ರೀನಗರ: ಕಣ್ಮನ ಸೆಳೆಯುವ ಕಾಶ್ಮೀರದ ಸೇಬಿನ ತೋಟಗಳಲ್ಲಿ ಸಮಸ್ಯೆಯೊಂದು ಸೃಷ್ಟಿಯಾಗುತ್ತಿದೆ. ‘ಇಂಡಿಯನ್ ಜರ್ನಲ್ ಆಫ್ ಅಕ್ಯುಪೇಷನಲ್ ಆ್ಯಂಡ್ ಎನ್ವಿರಾನ್ಮೆಂಟಲ್ ಮೆಡಿಸಿನ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ 2010ರ ಅಧ್ಯಯನ ವರದಿಯೊಂದರ ಪ್ರಕಾರ, ಕಾಶ್ಮೀರದಲ್ಲಿ ತೋಟ ಹೆಚ್ಚು ಇರುವ ಪ್ರದೇಶಗಳಲ್ಲಿ ಮಿದುಳಿನ ಕ್ಯಾನ್ಸರ್‌ಗೆ ತುತ್ತಾಗಿರುವವರಲ್ಲಿ ಶೇಕಡ 90ರಷ್ಟು ಮಂದಿ ಕೀಟನಾಶಕಗಳ ಪ್ರಭಾವಕ್ಕೆ ಒಳಗಾಗಿದ್ದರು.

ಅನಂತನಾಗ್, ಬಡಗಾಂ ಮತ್ತು ಬಾರಾಮುಲ್ಲಾ ಜಿಲ್ಲೆಗಳ ತೋಟಗಳಲ್ಲಿ ಕೆಲಸ ಮಾಡುವವರನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದೆ. ಕಣಿವೆಯ ಸೇಬಿನ ತೋಟಗಳಲ್ಲಿ ಶೇಕಡ 90ರಷ್ಟು ಇಲ್ಲೇ ಇವೆ. ಕುಲ್ಗಾಂ, ಶೋಪಿಯಾನ್ ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಅಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗಿವೆ.

ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದಷ್ಟೇ ಅಲ್ಲದೆ, ಕೆಲವು ಕೀಟನಾಶಕಗಳು ಹಣ್ಣಿನ ಗುಣಮಟ್ಟವನ್ನು ಹಾಳು ಮಾಡುತ್ತಿವೆ. ಕಣಿವೆಯಲ್ಲಿ ಬಳಕೆಯಲ್ಲಿರುವ ‘ಮ್ಯಾಂಕೊಜೆಬ್’ ಹೆಸರಿನ ಕೀಟನಾಶಕವನ್ನು ಕ್ಯಾನ್ಸರ್‌ಕಾರಕ ಎಂದು ಐರೋಪ್ಯ ಒಕ್ಕೂಟದಲ್ಲಿ ನಿಷೇಧಿಸಲಾಗಿದೆ. ಆದರೆ ಕಾಶ್ಮೀರದಲ್ಲಿ ಇದರ ಬಳಕೆಗೆ ನಿಯಂತ್ರಣ ಇಲ್ಲ.

ADVERTISEMENT

ಕೀಟನಾಶಕಗಳು ಕಾಶ್ಮೀರದ ಜಲಮೂಲಗಳನ್ನು ಪ್ರವೇಶಿಸುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತೋಟಗಾರಿಕೆಯಲ್ಲಿ ತೊಡಗಿರುವವರು ಮಲಿನ ನೀರನ್ನು ಬೆಳೆಗೆ ನೀರುಣಿಸಲು ಬಳಸುತ್ತಿದ್ದಾರೆ. ಆ ಮೂಲಕ ವಿಷಕಾರಕಗಳನ್ನು ಅವರು ಆಹಾರ ಸರಪಳಿಯೊಳಗೆ ಮತ್ತೆ ತರುತ್ತಿದ್ದಾರೆ.

‘ಕೀಟನಾಶಕಗಳ ಗುಣಮಟ್ಟದ ಮೇಲೆ ಹೆಚ್ಚು ನಿಗಾ ಇರಿಸುವುದು, ಕೀಟಗಳ ಬಾಧೆಯನ್ನು ತಾಳಿಕೊಳ್ಳುವ ಹಣ್ಣಿನ ತಳಿಗಳನ್ನು ಹೆಚ್ಚಾಗಿ ಬೆಳೆಯುವುದು, ಸಾವಯವ ಕೃಷಿ ಮಾದರಿ ಅನುಸರಿಸುವುದು ಈಗಿನ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗ ಆಗಿರಬಹುದು’ ಎಂದು ಕ್ಯಾನ್ಸರ್‌ ತಜ್ಞ ಡಾ. ಅಝರ್ ಜಾನ್ ಹೇಳಿದರು.

‘ಆಹಾರ ಮತ್ತು ಜಲ ಸರಪಳಿಯಲ್ಲಿ ಕೀಟನಾಶಕಗಳ ಇರುವಿಕೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳನ್ನು ನಡೆಸುವ ಅಗತ್ಯ ಇದೆ. ತಕ್ಷಣವೇ ಕೆಲವು ಕ್ರಮಗಳನ್ನು ಕೈಗೊಳ್ಳದೆ ಇದ್ದರೆ ನಾವು ಆರೋಗ್ಯದ ವಿಚಾರದಲ್ಲಿ ದೊಡ್ಡ ಸಮಸ್ಯೆಗೆ ಸಿಲುಕುತ್ತೇವೆ’ ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.