ADVERTISEMENT

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಆದಿತ್ಯ ಠಾಕ್ರೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 10:44 IST
Last Updated 9 ಡಿಸೆಂಬರ್ 2024, 10:44 IST
ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ   

ಮುಂಬೈ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೋಮವಾರ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ವಾರ್ಷಿಕ ಸಮಾವೇಶ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್‌) ಕರ್ನಾಟಕ ಸರ್ಕಾರ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ವೊರ್ಲಿ ಕ್ಷೇತ್ರದ ಶಾಸಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆದಿತ್ಯ, ಕೇಂದ್ರ ಸರ್ಕಾರಕ್ಕೆ ಈ ಬೇಡಿಕೆ ಇಟ್ಟಿದ್ದಾರೆ.

ADVERTISEMENT

ವಿಧಾನ ಭವನ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಆದಿತ್ಯ, 'ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಿಂದಾಗಿ ಸಂಭ್ರಮಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಬೆಳಗಾವಿಯ ಪರಿಸ್ಥಿತಿಯನ್ನು ನೋಡಿ. ನೆರೆಯ ಈ ಪ್ರದೇಶದಲ್ಲಿ, ಮರಾಠಿ ಭಾಷಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ' ಎಂದು ಹೇಳಿದ್ದಾರೆ.

ಗಡಿಯತ್ತ ತೆರಳುತ್ತಿದ್ದ ಶಿವಸೇನಾ (ಯುಬಿಟಿ) ನಾಯಕರು ಹಾಗೂ ಕಾರ್ಯಕರ್ತರ ಗುಂಪನ್ನು ಕೊಲ್ಹಾಪುರದಲ್ಲಿ ತಡೆಯಲಾಗಿದೆ.

ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್‌ ಸೇರಿದಂತೆ ಗಡಿಯಲ್ಲಿರುವ ಸುಮಾರು 814 ಗ್ರಾಮಗಳ ಮೇಲಿನ ಹಕ್ಕನ್ನು ಪ್ರತಿಪಾದಿಸುತ್ತಿರುವ ಮಹಾರಾಷ್ಟ್ರ, ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ, ಈ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಬೇಕು ಎಂದು ಒತ್ತಾಯಿಸುತ್ತಿದೆ.

ಉಭಯ ರಾಜ್ಯಗಳ ನಡುವಣ ದೀರ್ಘ ಕಾಲದಿಂದಲೂ ಚಾಲ್ತಿಯಲ್ಲಿರುವ ಗಡಿ ಬಿಕ್ಕಟ್ಟು, ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ವಿಚಾರವು ಸದ್ಯ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ.

ಬೆಳಗಾವಿಯಲ್ಲಿ ಸಾರ್ವಜನಿಕ ಸಮಾವೇಶ ನಡೆಸಲು ಎಂಇಎಸ್‌ಗೆ ಅನುಮತಿ ನೀಡಬೇಕು ಹಾಗೂ ಅದರಲ್ಲಿ ಭಾಗವಹಿಸಲು ಮಹಾರಾಷ್ಟ್ರ ನಾಯಕರಿಗೆ ಅನುಮತಿಸಬೇಕು ಎಂದು ಈ ಮೊದಲು ಶಿವಸೇನಾ (ಯುಬಿಟಿ) ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.