ADVERTISEMENT

ಬಿಜೆಪಿಯಿಂದಾಗಿ ದೀದಿ ದೇಗುಲಕ್ಕೆ: ಯೋಗಿ ಆದಿತ್ಯನಾಥ ಲೇವಡಿ

ಬಿಜೆಪಿ ಪ್ರಚಾರ ಸಭೆಯಲ್ಲಿ ಯೋಗಿ ಆದಿತ್ಯನಾಥ ಲೇವಡಿ

ಪಿಟಿಐ
Published 16 ಮಾರ್ಚ್ 2021, 19:12 IST
Last Updated 16 ಮಾರ್ಚ್ 2021, 19:12 IST
ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ
ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ   

ದಾಸಪುರ/ಬಿಸನ್‌ಪುರ/ಬಲರಾಂಪುರ (ಪಶ್ಚಿಮ ಬಂಗಾಳ): ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಮನಸ್ಥಿತಿ ಬದಲಾಗಿದೆ. ಹೀಗಾಗಿಯೇ ಮಮತಾ ಬ್ಯಾನರ್ಜಿ ಅವರು ಹಿಂದೂಗಳ ಓಲೈಕೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿರುವ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಮತಾ ವಿರುದ್ಧ ಮಂಗಳವಾರವೂ ವಾಗ್ದಾಳಿ ಮುಂದುವರಿಸಿದ್ದಾರೆ.

ಪುರೂಲಿಯಾ ಜಿಲ್ಲೆಯ ಬಲರಾಂಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಯೋಗಿ ಆದಿತ್ಯನಾಥ ಅವರು ಪ್ರಚಾರ ನಡೆಸಿದರು.

ADVERTISEMENT

‘2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಕೆಲವು ನಾಯಕರು ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ತಮ್ಮ ಜಾತ್ಯತೀತ ನಿಲುವಿಗೆ ಧಕ್ಕೆಯಾಗುತ್ತದೆ ಎಂದು ಭಾವಿಸುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಮನಸ್ಥಿತಿ ಬದಲಾಗಿದೆ. ಈಗ ಬದಲಾವಣೆಯಾಗಿದೆ. ಮಮತಾ ದೀದಿ ಅವರು ಈಗ ದೇವಸ್ಥಾನಗಳಿಗೆ ಹೋಗಲು ಆರಂಭಿಸಿದ್ದಾರೆ. ಚಂಡಿ ಪಾಠ್ ಪಠಣ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ರಾಹುಲ್ ಗಾಂಧಿ ಅವರೂ ದೇವಸ್ಥಾನಗಳಿಗೆ ಹೋಗುತ್ತಾರೆ, ಸರಿಯಾಗಿ ಕೂರಿ ಎಂದು ಅರ್ಚಕರಿಂದ ಹೇಳಿಸಿಕೊಳ್ಳುತ್ತಾರೆ’ ಎಂದು ಯೋಗಿ ಆದಿತ್ಯನಾಥ ಅವರು ಲೇವಡಿ ಮಾಡಿದ್ದಾರೆ.

‘ಮಮತಾ ಬ್ಯಾನರ್ಜಿ ಅವರು ತಮ್ಮ ಸರ್ಕಾರದ ಕೊನೆಯ ದಿನಗಳನ್ನು ಎಣಿಸುವ ಸಮಯ ಬಂದಿದೆ. ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಜನರು ತೀರ್ಮಾನಿಸಿದ್ದಾರೆ. ದೀದಿ ಅವರಿಗೆ 45 ದಿನಗಳು ಮಾತ್ರ ಉಳಿದಿವೆ’ ಎಂದು ಯೋಗಿ ಹೇಳಿದ್ದಾರೆ.

ರಾಜನಾಥ್ ವಾಗ್ದಾಳಿ: ‘ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯಲ್ಲಿ ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಮೇ 2ರ ನಂತರ ಬಿಜೆಪಿ ಅಧಿಕಾರಕ್ಕೆ ಬರಲಿ, ನಾವು ಅಭಿವೃದ್ಧಿ ಮತ್ತು ಶಾಂತಿಯ ಆಟ ಆಡುತ್ತೇವೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

‘ಸರ್ಕಾರದ ಒಂದು ರೂಪಾಯಿಯಲ್ಲಿ ಜನರಿಗೆ ತಲುಪುವುದು 16 ಪೈಸೆಯಷ್ಟೇ ಎಂದು ರಾಜೀವ್ ಗಾಂಧಿ ಹೇಳುತ್ತಿದ್ದರು. ಆದರೆ ಮೋದಿ ಸರ್ಕಾರವು ಜನರಿಗಾಗಿ ಬಿಡುಗಡೆಯಾದ ಪ್ರತಿ ಪೈಸೆಯೂ ಜನರಿಗೇ ತಲುಪುವಂತೆ ಮಾಡಿದೆ.ಪಶ್ಚಿಮ ಬಂಗಾಳದಲ್ಲಿ ಹೆದ್ದಾರಿ ಮತ್ತು ರಸ್ತೆ ಅಭಿವೃದ್ಧಿಗೆ ₹25,000 ಕೋಟಿ ನೀಡಿದ್ದೇವೆ. ಮಮತಾ ಬ್ಯಾನರ್ಜಿ ಅವರು ತಮ್ಮ ಸರ್ಕಾರದ ಹಣದಿಂದ ರಸ್ತೆ ನಿರ್ಮಿಸಿಲ್ಲ’ ಎಂದು ಅವರು ಹೇಳಿದ್ದಾರೆ.

‘ಓಲೈಕೆ ರಾಜಕಾರಣ’

‘ಮಮತಾ ಬ್ಯಾನರ್ಜಿ ಅವರು 10 ವರ್ಷದಲ್ಲಿ ಓಲೈಕೆ ರಾಜಕಾರಣ ಬಿಟ್ಟು ಬೇರೇನೂ ಮಾಡಿಲ್ಲ. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಸರಸ್ವತಿ ಪೂಜೆಯನ್ನು ನಿಲ್ಲಿಸಿದ್ದರು. ದುರ್ಗಾ ಪೂಜೆಯನ್ನು ನಿಲ್ಲಿಸಿದ್ದರು. ಈಗ ಚುನಾವಣೆ ಬಂದಿರುವ ಕಾರಣ, ಅವರಿಗೆ ತಮ್ಮ ಹಿಂದೂ ಅಸ್ಮಿತೆ ನೆನಪಾಗಿದೆ. ಹೀಗಾಗಿ ದೇವಾಲಯಗಳಿಗೆ ಹೋಗುತ್ತಿದ್ದಾರೆ. ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ‘ಮಮತಾ ಅವರು ತಾಯಿ, ಭೂಮಿ ಮತ್ತು ಜನರ ಹೆಸರಿನಲ್ಲಿ ಚುನಾವಣೆಯನ್ನು ಗೆದ್ದಿದ್ದರು. ಆದರೆ, ಈಗ ಮಹಿಳೆಯರಿಗೆ ಕಿರುಕುಳ, ಬಿಜೆಪಿ ಕಾರ್ಯಕರ್ತರ ಹತ್ಯೆ ಮತ್ತು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.