'ಫೆಂಗಲ್' ಚಂಡಮಾರುತ
(ಚಿತ್ರ ಕೃಪೆ: X@Indiametdept)
ಚೆನ್ನೈ: ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿ ‘ಫೆಂಗಲ್’ ಚಂಡಮಾರುತ ರೂಪುಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಫೆಂಗಲ್ ಚಂಡಮಾರುತ ಪುದುಚೇರಿಗೆ ನ.30ರಂದು ಅಪ್ಪಳಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.
ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪ್ಪುರಂ, ಕಲ್ಲಕುರಿಚಿ, ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯ ಒಂದೆರಡು ಕಡೆ, ರಾಣಿಪೇಟ್, ತಿರುವಣ್ಣಾಮಲೈ, ವೆಲ್ಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ನಾಗಪಟ್ಟಿಣಂ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶದ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆ.ಕೆ.ಎಸ್.ಎಸ್.ಆರ್. ರಾಮಚಂದ್ರನ್ ಅವರು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಭೆ ನಡೆಸಿದರು.
ಏತನ್ಮಧ್ಯೆ, ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರದಿಂದ 4,153 ದೋಣಿಗಳು ದಡಕ್ಕೆ ಮರಳಿವೆ. 2,229 ಪರಿಹಾರ ಶಿಬಿರಗಳು ಬಳಕೆಗೆ ಸಿದ್ಧವಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸದ್ಯಕ್ಕೆ ತಿರುವರೂರು ಮತ್ತು ನಾಗಪಟ್ಟಿಣಂ ಜಿಲ್ಲೆಗಳ ಆರು ಪರಿಹಾರ ಕೇಂದ್ರಗಳಲ್ಲಿ 164 ಕುಟುಂಬಗಳಿಗೆ ಸೇರಿದಂತೆ ಒಟ್ಟು 471 ಮಂದಿಗೆ ವಸತಿ ಕಲ್ಪಿಸಲಾಗಿದೆ.
ಇದರ ಪರಿಣಾಮ ಡಿಸೆಂಬರ್ 2ರಂದು ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ, ಕಾರೈಕಲ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ.
ಡಿಸೆಂಬರ್ 3ರಂದು ಕರ್ನಾಟಕ ಕರಾವಳಿ, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ, ಲಕ್ಷದ್ವೀಪ, ಕಾರೈಕಲ್ ಪ್ರದೇಶಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.