ಮುಂಬೈ: ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಕುರಿತು ಅಪಹಾಸ್ಯ ಮಾಡಿ ಹಾಡು ಹಾಡಿದ್ದಾರೆ ಎನ್ನಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸಾಕ್ಷಿಯಾಗಿ ವಿಚಾರಣೆಗೆ ಹಾಜರಾಗಲು ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.
ಕಾಮ್ರಾ ಅವರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ‘ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರಿಗೂ ಸಮನ್ಸ್ ನೀಡಲಾಗಿಲ್ಲ’ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದರು.
ಸಮನ್ಸ್ ನೀಡುವುದಕ್ಕೂ ಮೊದಲು ಬ್ಯಾಂಕ್ ಉದ್ಯೋಗಿಗೆ ಕರೆ ಮಾಡಿದ್ದ ಪೊಲೀಸರು, ತಕ್ಷಣ ಠಾಣೆಗೆ ಬರುವಂತೆ ತಿಳಿಸಿದ್ದರು. ಏಪ್ರಿಲ್ 6ರವರೆಗೆ ಪ್ರವಾಸದ ಮೇಲೆ ಬೇರೆಡೆ ಪ್ರಯಾಣಿಸಿದ್ದ ಉದ್ಯೋಗಿಯು ತಮ್ಮ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ, ತಕ್ಷಣವೇ ಮುಂಬೈಗೆ ಹಿಂತಿರುಗಿದರು. ನಂತರ, ಮತ್ತೊಮ್ಮೆ ಉದ್ಯೋಗಿಯನ್ನು ಸಂಪರ್ಕಿಸಿದ್ದ ಪೊಲೀಸರು, ‘ತಕ್ಷಣ ಬರುವ ಅಗತ್ಯವಿಲ್ಲ’ ಎಂದಿದ್ದಾರೆ.
ಮೂರನೇ ಸಮನ್ಸ್: ಏಪ್ರಿಲ್ 5ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕುನಾಲ್ ಕಾಮ್ರಾ ಅವರಿಗೆ ಬುಧವಾರ ಮುಂಬೈ ಪೊಲೀಸರು ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದರು.
36 ವರ್ಷದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಈಚೆಗೆ ಕಾರ್ಯಕ್ರಮವೊಂದರಲ್ಲಿ ಏಕನಾಥ ಶಿಂದೆ ಅವರನ್ನು 'ವಂಚಕ' ಎಂದು ಕರೆಯುವ ಮೂಲಕ ರಾಜಕೀಯ ವೃತ್ತಿಜೀವನವನ್ನು ಟೀಕಿಸಿದ್ದರು. ಇದು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.
ಕಾಮ್ರಾ ಅವರ ಕಾರ್ಯಕ್ರಮ ನಡೆದಿದ್ದ ಸ್ಥಳದಲ್ಲಿ ದಾಂದಲೆ ನಡೆಸಿದ ಆರೋಪದ ಅಡಿ ಪೊಲೀಸರು ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಮತ್ತು ಇತರರನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.