ADVERTISEMENT

ವಕ್ತಾರ ಸ್ವರಣಶ್ರೀರಾವ್‌ ರಾಜಶೇಖರ್‌ ಟ್ವೀಟ್‌ಗೆ ರಕ್ಷಣಾ ಸಚಿವಾಲಯ ಮುಜುಗರ

ಪಿಟಿಐ
Published 26 ಅಕ್ಟೋಬರ್ 2018, 16:46 IST
Last Updated 26 ಅಕ್ಟೋಬರ್ 2018, 16:46 IST
Twitter logo
Twitter logo   

ನವದೆಹಲಿ: ಸೇನೆಯ ಅಧಿಕಾರಿಗಳಿಂದ ಸೌಲಭ್ಯಗಳ ದುರ್ಬಳಕೆ ಕುರಿತಂತೆ ನೌಕಾಪಡೆಯ ನಿವೃತ್ತ ಅಡ್ಮಿರಲ್‌ ಒಬ್ಬರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸಚಿವಾಲಯದ ವಕ್ತಾರರು ‘ಆಕಸ್ಮಿಕ’ವಾಗಿ ಮಾಡಿರುವ ಟ್ವೀಟ್‌ಗೆ ರಕ್ಷಣಾ ಸಚಿವಾಲಯ ಮುಜುಗರ ಅನುಭವಿಸಬೇಕಾಯಿತು.

ತಾವು ಮಾಡಿದ ಟ್ವೀಟ್‌ಗೆ ಸೇನೆಯ ಹಿರಿಯ ಅಧಿಕಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಚಿವಾಲಯದ ವಕ್ತಾರ ಟ್ವೀಟ್‌ ಅನ್ನು ತೆಗೆದು ಹಾಕಿದ್ದಾರೆ. ಅಲ್ಲದೇ, ‘ಉದ್ದೇಶಪೂರ್ವಕವಾಗಿ ಈ ಟ್ವೀಟ್‌ ಮಾಡಿಲ್ಲ ಮತ್ತು ಇದಕ್ಕಾಗಿ ಕ್ಷಮೆ ಕೋರುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ವಿವರ: ಭೂಸೇನೆಯ ಪಶ್ಚಿಮ ಕಮಾಂಡ್‌ನ ಆಂತರಿಕ ಆರ್ಥಿಕ ಸಲಹೆಗಾರರ ಕಾರಿನ ಬಾನೆಟ್‌ ಮೇಲೆ ಸೇನೆಯ ಧ್ವಜ ಹಾರಾಡುತ್ತಿರುವ ಚಿತ್ರವನ್ನು ನಿವೃತ್ತ ಅಡ್ಮಿರಲ್‌ ಅರುಣ್‌ ಪ್ರಕಾಶ್‌ ಮರು ಟ್ವೀಟ್‌ ಮಾಡಿದ್ದರು.

ADVERTISEMENT

‘ಸೇನೆಯ ಹಿರಿಯ ಅಧಿಕಾರಿಗೆ ಸಂಬಂಧಿಸಿದ ಲಾಂಛನವನ್ನು ನಾಗರಿಕರೊಬ್ಬರು ದುರ್ಬಳಕೆ ಮಾಡಿಕೊಳ್ಳುವುದು ದೊಡ್ಡ ಅಪರಾಧವೇನಲ್ಲ. ಆದರೆ, ಆ ವ್ಯಕ್ತಿಗೆ ಎಚ್ಚರಿಕೆ ನೀಡಬೇಕು’ ಎಂದೂ ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವಾಲಯದ ವಕ್ತಾರರಾದ ಸ್ವರಣಶ್ರೀರಾವ್‌ ರಾಜಶೇಖರ್‌, ‘ಸೇನೆಯ ಅಧಿಕಾರಿಗಳ ಮನೆಯಲ್ಲಿ ಸೈನಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಬಗ್ಗೆ ಏನು ಹೇಳುತ್ತೀರಿ? ಸೇನೆಯ ವಾಹನಗಳಲ್ಲಿ ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಬಿಡುವುದು, ಅಲ್ಲಿಂದ ಕರೆದುಕೊಂಡು ಬರುವುದು, ಅಧಿಕಾರಿಯ ಪತ್ನಿ ಸರ್ಕಾರಿ ವಾಹನಗಳಲ್ಲಿ ಮಾರುಕಟ್ಟೆಗೆ ಹೋಗುವುದು ನಡೆದೇ ಇದೆ.

ಇಂತಹ ಕೃತ್ಯಗಳಿಗೆ ತಗಲುವ ವೆಚ್ಚವನ್ನು ಯಾರು ಭರಿಸುತ್ತಾರೆ?’ ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಖಂಡಿಸಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಟ್ವೀಟ್‌ ಮಾಡಿರುವ ನಿವೃತ್ತ ಮೇಜರ್‌ ಜನರಲ್‌ ಹರ್ಷ ಕಕರ್‌, ನೀವು ಸೇನೆಯ ಹಿತಾಸಕ್ತಿಯನ್ನು ಕಾಪಾಡಬೇಕೇ ಹೊರತು ಅವಮಾನಿಸಬಾರದು’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.