ADVERTISEMENT

ಸೇನೆ ಕಾರ್ಯಾಚರಣೆ | ನೇರ ಪ್ರಸಾರ, ಚರ್ಚೆ ಬೇಡ: ಮಾಧ್ಯಮಗಳಿಗೆ ಕೇಂದ್ರ ಮನವಿ

ಡೆಕ್ಕನ್ ಹೆರಾಲ್ಡ್
Published 26 ಏಪ್ರಿಲ್ 2025, 13:17 IST
Last Updated 26 ಏಪ್ರಿಲ್ 2025, 13:17 IST
   

ನವದೆಹಲಿ: ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರನ್ನು ಮಟ್ಟ ಹಾಕಲು ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಈ ಕುರಿತು ನೇರ ಪ್ರಸಾರ ಮಾಡುವುದು ಅಥವಾ ‘ಮೂಲಗಳನ್ನು ಉಲ್ಲೇಖಿಸಿ’ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚಿಸಿದೆ.

ಪಹಲ್ಗಾಮ್ ಉಗ್ರರ ದಾಳಿ ಬಳಿಕ ಮಾಧ್ಯಮಗಳು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಿರಂತರ ವರದಿ ಮಾಡುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.

‘ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಇಂತಹ ವರದಿಗಳ ಪ್ರಸಾರ/ಪ್ರಕಟಣೆ ಬೇಡ. ಕಾರ್ಯಾಚರಣೆ ಪೂರ್ಣಗೊಳ್ಳುವುದಕ್ಕೂ ಮೊದಲೇ ವಿವರಗಳನ್ನು ಬಹಿರಂಗಪಡಿಸಿದಲ್ಲಿ ಅದು ದೇಶವಿರೋಧಿ ಶಕ್ತಿಗಳಿಗೆ ಅನುಕೂಲವಾಗಬಹುದು’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸುದ್ದಿವಾಹಿನಿಗಳಿಗೆ ಸೂಚಿಸಿದೆ.

ADVERTISEMENT

ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸುದ್ದಿ ಮಾಧ್ಯಮಗಳು, ಸುದ್ದಿ ಸಂಸ್ಥೆಗಳು, ಸಾಮಾಜಿಕ ಜಾಲತಾಣ ಬಳಕೆದಾರರು ನಿಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳಿ. ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಕಾರ್ಯಾಚರಣೆಗಳ ನೇರ ವರದಿ ಮಾಡುವಾಗ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ನೈತಿಕ ಜವಾಬ್ದಾರಿ ಎಂದು ಹೇಳಿದೆ.

ವಿಶೇಷವಾಗಿ ರಕ್ಷಣಾ ಕಾರ್ಯಾಚರಣೆ ಮತ್ತು ಸೇನಾ ಚಲನವಲನದ ಕುರಿತು ಪ್ರತ್ಯಕ್ಷ ವರದಿ, ದೃಶ್ಯ ಪ್ರಸಾರ, ‘ಮೂಲಗಳನ್ನಾಧರಿಸಿದ’ ಮಾಹಿತಿ ವರದಿ ಮಾಡಬಾರದು. ಸೂಕ್ಷ್ಮ ಮಾಹಿತಿಯನ್ನು ಮೊದಲೇ ಬಹಿರಂಗ ಪಡಿಸಿದರೆ ಶತ್ರುಗಳು ಎಚ್ಚೆತ್ತುಕೊಳ್ಳಲಿದ್ದಾರೆ ಮತ್ತು ಕಾ‌ಯಾಚರಣೆ ನಿರೀಕ್ಷಿತ ಫಲ ನೀಡದು. ಭದ್ರತಾ ಸಿಬ್ಬಂದಿಗೂ ಅಪಾಯವನ್ನುಂಟುಮಾಡಬಹುದು ‌ಎಂದು ಹೇಳಿದೆ.

ಈ ಹಿಂದೆ ಕಾರ್ಗಿಲ್‌ ಯುದ್ಧ, 2008ರ ಮುಂಬೈ ದಾಳಿ ಮತ್ತು ಕಂದಹಾರ್ ಅಪಹರಣ ಪ್ರಕರಣಗಳ ಸಂದರ್ಭದಲ್ಲಿ ಅನಿರ್ಬಂಧಿತ ವರದಿಗಳು ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಿವೆ ಎಂದು ಸರ್ಕಾರ ನೆನಪಿಸಿದೆ.

ತಂತ್ರಗಾರಿಕೆ, ಕಾರ್ಯಾಚರಣೆ, ಭೂಪ್ರದೇಶಗಳ ಕುರಿತು ವಿಶ್ಲೇಷಣೆ ಸೇರಿದಂತೆ ಸೇನೆಗೆ ಸಂಬಂಧಿಸಿದ ವಿಚಾರಗಳ ಕುರಿತು ಕೆಲ ಮಾಧ್ಯಮ ಸಂಸ್ಥೆಗಳು ಚರ್ಚೆ ನಡೆಸುತ್ತಿರುವ ಕುರಿತು ಸೇನೆ ಕಳವಳ ವ್ಯಕ್ತಪಡಿಸಿತ್ತು.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ತಿದ್ದುಪಡಿ) ನಿಯಮಗಳು, 2021ರ ಪ್ರಕಾರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ನೇರ ಪ್ರಸಾರ ಶಿಕ್ಷಾರ್ಹ ಅಪರಾಧ ಎಂದು ಸಚಿವಾಲಯ ಎಚ್ಚರಿಸಿದೆ.

‘ಉಗ್ರ ನಿಗ್ರಹ ಕಾರ್ಯಾಚರಣೆ ಪೂರ್ಣಗೊಂಡ ನಂತರ, ನಿಯೋಜಿತ ಅಧಿಕಾರಿಯೊಬ್ಬರು ಈ ಕುರಿತು ನಿಯಮಿತವಾಗಿ ಮಾಹಿತಿ ನೀಡುವರು’ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.