ADVERTISEMENT

ಪ.ಬಂಗಾಳ ಚುನಾವಣೆ: ದೆಹಲಿಗೆ ಟಿಎಂಸಿ ಸಂಸದರ ನಿಯೋಗ, ಚುನಾವಣಾ ಆಯೋಗಕ್ಕೆ ಭೇಟಿ

ಪಿಟಿಐ
Published 14 ಏಪ್ರಿಲ್ 2021, 4:57 IST
Last Updated 14 ಏಪ್ರಿಲ್ 2021, 4:57 IST
ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿ ಮಂಗಳವಾರ ಧರಣಿ ನಡೆಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿ ಮಂಗಳವಾರ ಧರಣಿ ನಡೆಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ   

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಸಂಸದರ ನಿಯೋಗವು ಬುಧವಾರ ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ಟಿಎಂಸಿ ಪಕ್ಷವು ತಿಳಿಸಿದೆ.

ಸಂಸದ ಡೆರಿಕ್‌ ಒಬ್ರಿಯಾನ್‌, ಕಲ್ಯಾಣ್‌ ಬ್ಯಾನರ್ಜಿ, ಪ್ರತಿಮಾ ಮಂಡಲ್ ಹಾಗೂ ಶಾಂತನೂ ಸೇನ್‌ ಅವರನ್ನು ನಿಯೋಗ ಒಳಗೊಂಡಿದೆ. ಅವರು ಮಧ್ಯಾಹ್ನ 3:30ಕ್ಕೆ ಚುನಾವಣಾ ಆಯೋಗದ ಕಚೇರಿಯನ್ನು ತಲುಪಲಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು 24 ಗಂಟೆ ಪ್ರಚಾರ ನಡೆಸುವುದಕ್ಕೆ ನಿಷೇಧ ಹೇರಿ ಚುನಾವಣಾ ಆಯೋಗವು ಸೋಮವಾರ ಆದೇಶ ಹೊರಡಿಸಿತ್ತು. ಸೋಮವಾರ ರಾತ್ರಿ 8ರಿಂದ ಮಂಗಳವಾರ ರಾತ್ರಿ 8ರವರೆಗೆ ನಿಷೇಧ ಜಾರಿಗೊಳಿಸಿತ್ತು. ಚುನಾವಣಾ ಆಯೋಗದ ನಿರ್ಧಾರವನ್ನು ವಿರೋಧಿಸಿ ಮಂಗಳವಾರ ಮಮತಾ, ಮೂರುವರೆ ಗಂಟೆಗಳ ಧರಣಿ ನಡೆಸಿದರು.

ADVERTISEMENT

ಮಮತಾ ಅವರ ಪ್ರಚಾರಕ್ಕೆ ನಿಷೇಧ ಪ್ರಕಟಗೊಳ್ಳುತ್ತಿದ್ದಂತೆ, ಟಿಎಂಸಿ ಚುನಾವಣಾ ಆಯೋಗದ ವಿರುದ್ಧ ಟೀಕಾಪ್ರಹಾರ ನಡೆಸಿತು. ಚುನಾವಣಾ ಆಯೋಗವು 'ಬಿಜೆಪಿಯ ಒಂದು ಘಟಕವೇನೋ' ಎಂಬಂತೆ ವರ್ತಿಸುತ್ತಿದೆ ಹಾಗೂ ನಿರಂಕುಶವಾದ ನಿರ್ಧಾರವಾಗಿದೆ ಎಂದು ಆರೋಪಿಸಿದೆ.

‘ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಭದ್ರತಾಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳು ರಾಜ್ಯದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದಿದೆ. ಹೀಗಾಗಿ ಅವರ ಪ್ರಚಾರದ ಮೇಲೆ ನಿಷೇಧ ಹೇರಲಾಗಿದೆ’ ಎಂದು ಚುನಾವಣಾ ಆಯೋಗವು ಹೇಳಿತ್ತು.

ಪಶ್ಚಿಮ ಬಂಗಾಳ ವಿಧಾನಸಭೆಗೆ ಶನಿವಾರ ನಡೆದ ನಾಲ್ಕನೇ ಹಂತದ ಮತದಾನವು ಭಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಕೂಚ್‌ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಘರ್ಷಣೆ ಸಂಭವಿಸಿದ್ದ ವೇಳೆ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು. ಘಟನೆಯು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಮಮತಾ ಬ್ಯಾನರ್ಜಿ ಅವರು ಕೇಂದ್ರದ ಪಡೆಗಳಿಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದೇ ಕೂಚ್‌ ಬಿಹಾರ್‌ನಲ್ಲಿ ಜನರು ಸಿಐಎಸ್‌ಎಫ್‌ ಮೇಲೆ ದಾಳಿಗೆ ಮುಂದಾಗಲು ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.