
ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದವರು ಫಲಕ ಹಿಡಿದು ಘೋಷಣೆ ಕೂಗಿದರು
ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಮಟ್ಟ ಹೆಚ್ಚುತ್ತಿದ್ದರೂ ಸರ್ಕಾರ ಯಾವುದೇ ಕ್ರಮವಹಿಸದಿರುವುದನ್ನು ಖಂಡಿಸಿ ಇಂಡಿಯಾ ಗೇಟ್ ಬಳಿ ಭಾನುವಾರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 22 ಮಂದಿಯನ್ನು ಬಂಧಿಸಲಾಗಿದೆ.
ಮಹಿಳೆಯರ ಗೌರವಕ್ಕೆ ಧಕ್ಕೆ ತರುವುದು ಸೇರಿದಂತೆ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪೊಲೀಸರು ಸಂಸದ್ ಮಾರ್ಗ ಪೊಲೀಸ್ ಠಾಣೆ ಮತ್ತು ಕರ್ತವ್ಯ ಪಥ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
‘ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದರಿಂದ ಆಂಬುಲೆನ್ಸ್‌ಗಳ ಓಡಾಟ ಮತ್ತು ಆ ರಸ್ತೆಯಲ್ಲಿ ಸಾಗುತ್ತಿದ್ದ ವೈದ್ಯಕೀಯ ಸಿಬ್ಬಂದಿಗೆ ಅಡ್ಡಿ ಉಂಟಾಯಿತು. ಆದ್ದರಿಂದ ಸ್ಥಳವನ್ನು ತೊರೆಯುವಂತೆ ಪ್ರತಿಭಟನಕಾರರಿಗೆ ಸೂಚಿಸಿದೆವು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.
‘ನಂತರ ಪರಿಸ್ಥಿತಿ ಸಂಘರ್ಷಕ್ಕೆ ತಿರುಗಿತು. ಕೆಲವು ಪ್ರತಿಭಟನಕಾರರು ನಮ್ಮ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದರು. ಪೊಲೀಸರ ಕರ್ತವ್ಯಕ್ಕೆ ಈ ರೀತಿ ಅಡ್ಡಿಪಡಿಸುವುದು ಅಪರೂಪ’ ಎಂದು ಹೇಳಿದರು. ಬಂಧಿತರಲ್ಲಿ ಐವರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ‘ಗಂಭೀರ ಅಪಾಯ’ ಉಂಟುಮಾಡಿದೆ. ಮಾಲಿನ್ಯದ ಮೂಲ ಕಾರಣಗಳನ್ನು ಪತ್ತೆಹಚ್ಚಿ, ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನೆ ನಡೆಸಿದ ‘ದೆಹಲಿ ಕೋ–ಆರ್ಡಿನೇಷನ್ ಕಮಿಟಿ’ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.