ADVERTISEMENT

ಎಎಪಿಗೆ ಗುಡ್ ಬೈ ಹೇಳಿದ ದೆಹಲಿ ಶಾಸಕಿ ಅಲ್ಕಾ ಲಾಂಬ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 7:55 IST
Last Updated 6 ಸೆಪ್ಟೆಂಬರ್ 2019, 7:55 IST
   

ನವದೆಹಲಿ: ಇದು ಗುಡ್ ಬೈ ಹೇಳುವ ಸಮಯ ಎಂದು ಟ್ಟೀಟಿಸಿದೆಹಲಿಯ ಚಾಂದ್ನಿ ಚೌಕ್ ಶಾಸಕಿ ಅಲ್ಕಾ ಲಾಂಬ ಆಮ್ ಆದ್ಮಿ ಪಕ್ಷ ತೊರೆದಿದ್ದಾರೆ.

1994ರಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ರಾಜಕೀಯ ಪಯಣ ಆರಂಭಿಸಿದ್ದ ಲಾಂಬ ಇದೀಗ ಎಎಪಿ ತೊರೆದು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಎಎಪಿ ಪಕ್ಷಕ್ಕೆ ಗುಡ್ ಬೈ ಹೇಳುವ ಸಮಯ ಇದು. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕಳೆದ 6 ವರ್ಷಗಳ ಪಯಣ ನನಗೆ ತುಂಬಾ ಕಲಿಸಿದೆ. ಎಲ್ಲರಿಗೂ ಧನ್ಯವಾದಗಳು ಎಂದು 43ರ ಹರೆಯದ ಲಾಂಬ ಟ್ವೀಟಿಸಿದ್ದಾರೆ.
ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸುವುದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು ಲಾಂಬ. ಈ ಭೇಟಿಯ ಬೆನ್ನಲ್ಲೇ ಲಾಂಬ ರಾಜೀನಾಮೆ ನೀಡಿದ್ದಾರೆ.

ಪ್ರಸ್ತುತ ವಿದ್ಯಮಾನಗಳ ಬಗ್ಗೆ ಶ್ರೀಮತಿ ಸೋನಿಯಾ ಗಾಂಧಿ ಜತೆ ಮಾತನಾಡಿದೆ. ಇವತ್ತು ಅವರಜತೆ ಚರ್ಚಿಸುವ ಅವಕಾಶ ಸಿಕ್ಕಿತು. ರಾಜಕೀಯದಲ್ಲಿ ಈ ರೀತಿಯ ಚರ್ಚೆ ಆಗಬೇಕು. ಅದು ಮುಂದುವರಿಯಬೇಕು ಎಂದು ಸೆಪ್ಟೆಂಬರ್ 3ರಂದು ಲಾಂಬ ಟ್ವೀಟ್ ಮಾಡಿದ್ದರು.

ಎಎಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿದ್ದ ಶಾಸಕಿ ತಾನು ಪಕ್ಷ ತೊರೆಯುವುಗಾಗಿ ಆಗಸ್ಟ್ 4 ರಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, ಅವರು ಈ ಹಿಂದೆ ಹಲವಾರು ಬಾರಿ ರಾಜೀನಾಮೆ ಘೋಷಿಸಿದ್ದರು. ಪಕ್ಷದ ನಾಯಕರಿಗೆ ರಾಜೀನಾಮೆ ಕಳಿಸಿಲುಒಂದು ನಿಮಿಷ ಸಾಕು. ನಾನು ಟ್ವಿಟರ್‌ನಲ್ಲಿಯೂ ರಾಜೀನಾಮೆ ಪತ್ರ ಸ್ವೀಕರಿಸುತ್ತೇವೆ ಎಂದಿದ್ದರು.

ಲಾಂಬ ಮತ್ತು ಎಎಪಿ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಬಾರಿ ಜಗಳವಾಗಿದೆ.ಲೋಕಸಭಾ ಚುನಾವಣೆಯಲ್ಲಿ ಎಎಪಿ ಪರಾಭವಗೊಂಡಾಗ ಆಕೆಯನ್ನು ಪಕ್ಷದ ಅಧಿಕೃತ ವಾಟ್ಸ್‌ಆ್ಯಪ್ ಗುಂಪಿನಿಂದ ತೆಗೆದುಹಾಕಲಾಗಿತ್ತು.

ಲೋಕಸಭಾ ಚುನಾವಣೆಗೆ ಪ್ರಚಾರ ಮಾಡಲು ಲಾಂಬ ನಿರಾಕರಿಸಿದ್ದರು. ಅರವಿಂದ ಕೇಜ್ರಿವಾಲ್ ಅವರ ರೋಡ್‌ ಶೋನಲ್ಲಿ ಅವರ ಕಾರಿನವ ಹಿಂದೆ ಹೋಗಲು ಲಾಂಬ ಅವರಿಗೆ ಹೇಳಿದ್ದರು. ಇದರಿಂದ ಮುನಿಸಿಕೊಂಡ ಲಾಂಬ ಚುನಾವಣಾ ಪ್ರಚಾರದಿಂದಲೂ ಹಿಂದೆ ಸರಿದಿದ್ದರು.

1994ರಲ್ಲಿ ವಿದ್ಯಾರ್ಥಿ ಸಂಘಟನೆಯ ನಾಯಕಿಯಾಗಿ ರಾಜಕೀಯಕ್ಕೆ ಬಂದ ಲಾಂಬ 2002ರಲ್ಲಿ ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2003ರಲ್ಲಿ ಬಿಜೆಪಿಯ ಹಿರಿಯ ನಾಯಕ ಮದನ್ ಲಾಲ್ ಖುರಾನ ಅವರ ವಿರುದ್ಧ ಮೋತಿ ನಗರ್ ಚುನಾವಣಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.
2014 ಡಿಸೆಂಬರ್‌ನಲ್ಲಿ ಕಾಂಗ್ರೆಸ್ ತೊರೆದು ಎಎಪಿ ಸೇರಿದ ಲಾಂಬ, 2015ರಲ್ಲಿ ಬಿಜೆಪಿ ಅಭ್ಯರ್ಥಿ ಸುಮನ್ ಕುಮಾರ್ ಗುಪ್ತಾ ಅವರನ್ನು ಪರಾಭವಗೊಳಿಸಿ ಚಾಂದ್ನಿ ಚೌಕ್ ಶಾಸಕಿಯಾಗಿ ಚುನಾಯಿತಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.