ADVERTISEMENT

ದೆಹಲಿ ಚುನಾವಣೆ: ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದ ಮೋದಿ, ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 9:06 IST
Last Updated 8 ಫೆಬ್ರುವರಿ 2020, 9:06 IST
   

ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಆರಂಭವಾಗಿದ್ದು, ಜನರು ತಪ್ಪದೆಮತದಾನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಕರೆ ನೀಡಿದ್ದಾರೆ.

ಮೋದಿ ಚುನಾವಣೆಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ,‘ಇದು ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ದಿನ.ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮತದಾನದಹೊಸ ದಾಖಲೆಯನ್ನು ನಿರ್ಮಿಸಬೇಕೆಂದು ಎಲ್ಲ ಮತದಾರರಲ್ಲಿ ಮನವಿ ಮಾಡುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

ಮುಂದುವರಿದು,‘ದೆಹಲಿಯ ಜನರನ್ನು, ಅದರಲ್ಲೂ ಯುವಕರನ್ನು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ADVERTISEMENT

ಮುಖ್ಯಮಂತ್ರಿ ಕೇಜ್ರಿವಾಲ್‌,‘ಎಲ್ಲರೂ ತಪ್ಪದೆ ಮತ ಚಲಾಯಿಸಿ.ವಿಶೇಷವಾಗಿ ಮಹಿಳೆಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನೀವು ಮನೆಯ ಹೊಣೆಯನ್ನು ಹೊತ್ತುಕೊಂಡಂತೆಯೇ ದೇಶದ ಮತ್ತು ದೆಹಲಿಯ ಜವಾಬ್ದಾರಿಯನ್ನೂ ನಿಭಾಯಿಸಿ. ಎಲ್ಲ ಮಹಿಳೆಯರೂ ಮತದಾನಕ್ಕೆ ತೆರಳಿ ಮತ್ತು ಪುರುಷರನ್ನೂ ಮನೆಯಿಂದ ಕರೆದೊಯ್ಯಿರಿ. ಯಾವುದು ಸರಿ ಎಂದು ಪುರುಷರೊಂದಿಗೆಚರ್ಚಿಸಿ’ ಎಂದು ಕರೆ ನೀಡಿದ್ದಾರೆ.

ದೆಹಲಿಯಲ್ಲಿಒಟ್ಟು 1,47,86,382ಮತದಾರರಿದ್ದು, 2,689 ಕೇಂದ್ರಗಳ13,750 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 516 ಕೇಂದ್ರ ಹಾಗೂ 3,704 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದು, ಆಡಳಿತ ಪಕ್ಷ ಎಎಪಿ ಮತ್ತು ಬಿಜೆಪಿ, ಕಾಂಗ್ರೆಸ್‌ನಡುವೆ ಪೈಪೋಟಿ ಇದೆ.

ಭದ್ರತೆಗಾಗಿ40,000 ರಕ್ಷಣಾ ಸಿಬ್ಬಂದಿ,19,000 ಗೃಹ ರಕ್ಷಣಾ ದಳ ಸಿಬ್ಬಂದಿ, ಕೇಂದ್ರ ಸಶಸ್ತ್ರ ಮೀಸಲು ಪಡೆಯ 190 ಪಡೆಗಳನ್ನು ನಿಯೋಜಿಸಲಾಗಿದೆ.

ಕಳೆದ ಚುನಾವಣೆಯಲ್ಲಿ67 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೇರಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಈ ಬಾರಿ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಬಹುದಾದರೂ ಮತ್ತೆ ಅಧಿಕಾರಕ್ಕೇರುವುದು ಖಚಿತ ಎಂದು ಸಮೀಕ್ಷೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.