ಅರವಿಂದ ಕೇಜ್ರಿವಾಲ್
ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲು ಬಿಜೆಪಿಯು ಗೂಂಡಾಗಳನ್ನು ಹಾಗೂ ಪೊಲೀಸರನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ. ಅವರ ದುಷ್ಕೃತ್ಯಗಳನ್ನು ಸೆರೆಹಿಡಿಯಲು ಸ್ಪೈ ಕ್ಯಾಮೆರಾಗಳೊಂದಿಗೆ ತಂಡ ನಿಯೋಜಿಸಿದ್ದೇವೆ ಎಂದು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆದು, 8ರಂದು ಫಲಿತಾಂಶ ಪ್ರಕಟವಾಗಲಿದೆ. 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಎಪಿಯು ಸತತ ಮೂರನೇ ಅವಧಿಗೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.
ಬಹಿರಂಗ ಪ್ರಚಾರದ ಕೊನೇ ದಿನವಾದ ಇಂದು ವಿಡಿಯೊ ಸಂದೇಶ ಹಂಚಿಕೊಂಡಿರುವ ಕೇಜ್ರಿವಾಲ್, 'ಹೀನಾಯ ಸೋಲಿನತ್ತ ಮುಖ ಮಾಡಿರುವ ಬಿಜೆಪಿ, ತಂತ್ರಗಾರಿಕೆಯ ಮೊರೆ ಹೋಗಿದೆ. ಅದರ ಹೊರತಾಗಿಯೂ ಎಎಪಿ ಐತಿಹಾಸಿಕ ಗೆಲುವು ಸಾಧಿಸಲಿದೆ' ಎಂದು ಹೇಳಿದ್ದಾರೆ.
'ಬಿಜೆಪಿಯು ಚುನಾವಣೆಯನ್ನು ಗೆಲ್ಲಲು ಗೂಂಡಾಗಳನ್ನು, ದೆಹಲಿ ಪೊಲೀಸರನ್ನು ಭಾರಿ ಪ್ರಮಾಣದಲ್ಲಿ ಬಳಸುತ್ತದೆ. ಅವರು ಮತದಾರರನ್ನು ಅದರಲ್ಲೂ ಕೊಳಗೇರಿಗಳ ನಿವಾಸಿಗಳನ್ನು ಬೆದರಿಸಲು ಪ್ರಯತ್ನಿಸುತ್ತಾರೆ' ಎಂದು ದೂರಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಜ್ರಿವಾಲ್, 'ಬಿಜೆಪಿ ಕಾರ್ಯಕರ್ತರು ಕೊಳಗೇರಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ₹ 3,000ರಿಂದ ₹ 5,000 ಆಮಿಷ ಒಡ್ಡುತ್ತಿದ್ದಾರೆ. ಬೆರಳಿಗೆ ಶಾಯಿ ಹಾಕಿ ಅವರನ್ನು ಮತದಾನದಿಂದ ದೂರ ಉಳಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂಬುದಾಗಿ ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರು, ಯಾವುದೇ ಪಕ್ಷದ ಹೆಸರು ಉಲ್ಲೇಖಿಸದೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರುತ್ತಾ ಇಂಥದೇ ಆರೋಪವನ್ನು ಭಾನುವಾರವೂ ಮಾಡಿದ್ದರು. ಇಂದು ಬಿಜೆಪಿಯನ್ನು ಗುರಿಯಾಗಿಸಿ ಟೀಕಿಸಿದ್ದಾರೆ.
'ಹಣ ಕೊಟ್ಟರೆ ಪಡೆಯಿರಿ. ಆದರೆ, ನಿಮ್ಮ ಬೆರಳಿಗೆ ಶಾಯಿ ಹಾಕಿಸಿಕೊಳ್ಳಬೇಡಿ' ಎಂದು ಕಿವಿಮಾತು ಹೇಳಿರುವ ಕೇಜ್ರಿವಾಲ್, 'ಎಎಪಿಯು ಕ್ಷಿಪ್ರ ಕಾರ್ಯ ಪಡೆಗಳನ್ನು ನಿಯೋಜಿಸಿದೆ. ಬಿಜೆಪಿಯ ಗೂಂಡಾಗಳು ಅಕ್ರಮವೆಸಗುವುದನ್ನು ಸೆರೆ ಹಿಡಿಯಲು ಕೊಳಗೇರಿಗಳಲ್ಲಿ ಸ್ಪೈ ಕ್ಯಾಮೆರಾ ಹಾಗೂ ಬಾಡಿ ಕ್ಯಾಮೆರಾಗಳನ್ನು ವಿತರಿಸಿದೆ' ಎಂದು ತಿಳಿಸಿದ್ದಾರೆ.
ಬಿಜೆಪಿಯ ದೃಷ್ಕೃತ್ಯಗಳ ವಿರುದ್ಧ ಜನರಿಗೆ ಎಚ್ಚರಿಕೆ ನೀಡಿರುವ ಅವರು, 'ಬಿಜೆಪಿ ಅಧಿಕಾರಕ್ಕೇರಿದರೆ ಕೊಳಗೇರಿಗಳನ್ನು ನಾಶ ಮಾಡಲಿದೆ' ಎಂದು ಆರೋಪಿಸಿದ್ದಾರೆ. ಹಾಗೆಯೇ, 'ಮತಗಳನ್ನು ಮಾರಿಕೊಳ್ಳುವುದು, ನೀವು ನಿಮ್ಮದೇ ಡೆತ್ ವಾರಂಟ್‌ಗೆ ಸಹಿ ಮಾಡಿದಂತೆ' ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.