ಎಎಪಿ-ಕಾಂಗ್ರೆಸ್
(ಸಾಂದರ್ಭಿಕ ಚಿತ್ರ)
ನವದೆಹಲಿ: ರಾಜಸ್ಥಾನ ಸಂಸದ ಹುನಮಾನ್ ಬೆನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಬೆಂಬಲಿಸುವುದಾಗಿ ಘೋಷಿಸಿದೆ. ಅದರೊಂದಿಗೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಸಮಾಜವಾದಿ ಪಕ್ಷಗಳ (ಎಸ್‌ಪಿ) ಹಾದಿಯಲ್ಲಿ ಸಾಗಿದೆ.
ರಾಜ್ಯಸಭೆಯಲ್ಲಿ ಎಎಪಿ ನಾಯಕರಾಗಿರುವ ಸಂಜಯ್ ಸಿಂಗ್ ಅವರನ್ನು ನಗರದಲ್ಲಿ ಭೇಟಿಯಾದ ಬಳಿಕ ಬೆನಿವಾಲ್ ಅವರು ತಮ್ಮ ಪಕ್ಷದ ನಿಲುವು ಪ್ರಕಟಿಸಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ದೇಶದಾದ್ಯಂತ ಮೀಸಲಾತಿ ಪಟ್ಟಿಯಲ್ಲಿ ಜಾಟ್ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ, ಬೆನಿವಾಲ್ ಬೆಂಬಲ ಸೂಚಿಸಿದ್ದಾರೆ.
'ಕಾಂಗ್ರೆಸ್ ಪಕ್ಷವು, ಹಲವು ವರ್ಷಗಳಿಂದ ಯಾವುದೇ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದೆ. ಹೀಗಾಗಿ, ದೆಹಲಿ ಚುನಾವಣೆಯಲ್ಲಿ ಎಎಪಿ ವಿರುದ್ಧ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕಿತ್ತು' ಎಂದು ಬೆನಿವಾಲ್ ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಶಿವಸೇನಾ (ಯುಬಿಟಿ) ಸಹ ಈಗಾಗಲೇ ಎಎಪಿಗೆ ಬೆಂಬಲ ಸೂಚಿಸಿದೆ. ಟಿಎಂಸಿ ಮತ್ತು ಎಸ್‌ಪಿಯೂ ಈಗಾಗಲೇ ಈ ತೀರ್ಮಾನ ಮಾಡಿವೆ. ಇದರೊಂದಿಗೆ, ಇಂಡಿಯಾ ಮೈತ್ರಿಕೂಟದಲ್ಲಿರುವ ಪ್ರಮುಖ ಪಕ್ಷ ಕಾಂಗ್ರೆಸ್ ಭಾರಿ ಹಿನ್ನಡೆ ಎದುರಾದಂತಾಗಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಮೂರು ದಿನಗಳ ಬಳಿಕ (ಜ.8ರಂದು) ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.