ರಮೇಶ್ ಬಿಧೂಢಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ
ಚಿತ್ರಕೃಪೆ: X / @MrSinha_ ಹಾಗೂ ಪಿಟಿಐ
ನವದೆಹಲಿ: ‘ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದ ನಂತರ, ಕ್ಷೇತ್ರದ ರಸ್ತೆಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಯವಾದ ‘ಕೆನ್ನೆ’ಗಳ ರೀತಿ ಅಭಿವೃದ್ಧಿಪಡಿಸುವೆ’ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಕಾಲ್ಕಾಜಿ ಕ್ಷೇತ್ರದ ಅಭ್ಯರ್ಥಿ ರಮೇಶ್ ಬಿಧೂಡಿ ಹೇಳಿದ್ದಾರೆ ಎನ್ನಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು.
ಭಾನುವಾರ, ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಬಿಧೂಡಿ, ನಂತರ, ವಿಷಾದ ವ್ಯಕ್ತಪಡಿಸಿದ್ದಾರೆ.
ಬಿಧೂಡಿ ಹೇಳಿಕೆಯನ್ನು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ಖಂಡಿಸಿವೆ.
30 ವರ್ಷಗಳ ಹಿಂದೆ, ನಟಿ ಹಾಗೂ ಸಂಸದೆ ಹೇಮಾಮಾಲಿನಿ ಕುರಿತು ಲಾಲು ಪ್ರಸಾದ್ ಅವರು ನೀಡಿದ್ದ ಇಂಥಹುದೇ ಹೇಳಿಕೆಯನ್ನು ಉಲ್ಲೇಖಿಸಿದ್ದ ಬಿಧೂಡಿ, ಮೊದಲು ಲಾಲು ಪ್ರಸಾದ್ ಕ್ಷಮೆ ಯಾಚಿಸಲಿ ಎಂದಿದ್ದರು.
ನಂತರ, ‘ರಾಜಕೀಯವಾಗಿ ಲಾಭದ ಪಡೆಯುವ ಉದ್ದೇಶದಿಂದ, ನಿರ್ದಿಷ್ಟ ಸಂದರ್ಭವೊಂದರಲ್ಲಿ ನಾನು ನೀಡಿದ್ದ ಹೇಳಿಕೆ ಕುರಿತು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಾಗಿರಲಿಲ್ಲ. ಆದಾಗ್ಯೂ, ಯಾರಿಗಾದರೂ ನೋವಾಗಿದ್ದಲ್ಲಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಧೂಡಿ ಏನು ಹೇಳಿದ್ದರು?: ಮುಖ್ಯಮಂತ್ರಿ ಆತಿಷಿ ವಿರುದ್ಧ ಕಾಲ್ಕಾಜಿ ಕ್ಷೇತ್ರದಲ್ಲಿ ಬಿಧೂಡಿ ಅವರೇ ಅಭ್ಯರ್ಥಿ ಎಂಬುದಾಗಿ ಶನಿವಾರ ಘೋಷಿಸಿದ ನಂತರ, ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ್ದರು.
‘ಹೇಮಾಮಾಲಿನಿ ಅವರ ಕೆನ್ನೆಗಳಂತೆ ಬಿಹಾರದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಲಾಲು ಪ್ರಸಾದ್ ಹೇಳಿದ್ದರು. ಆದರೆ, ಆ ರೀತಿ ಅವರು ಮಾಡಲಿಲ್ಲ. ಅವರು ಸುಳ್ಳು ಹೇಳಿದ್ದರು’ ಎಂದು ಬಿಧೂಡಿ ಹೇಳಿದ್ದರು.
‘ಓಖ್ಲಾ ಮತ್ತು ಸಂಗಮ್ ವಿಹಾರ ಕ್ಷೇತ್ರದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿರುವ ರೀತಿಯಲ್ಲಿಯೇ ಕಾಲ್ಕಾಜಿಯ ಎಲ್ಲ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿ ಅವರ ನಯವಾದ ಕೆನ್ನೆಗಳಂತೆ ಅಭಿವೃದ್ಧಿಪಡಿಸಲಾಗುವುದು ಎಂಬ ಭರವಸೆಯನ್ನು ನಾನು ನೀಡುತ್ತೇನೆ’ ಎಂದು ಬಿಧೂಡಿ ಅವರು ಹೇಳಿದ್ದರು ಎನ್ನಲಾದ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಕಾಲ್ಕಾಜಿ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಅಲ್ಕಾ ಲಾಂಬಾ ಅವರು ಬಿಧೂಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಸಂಸತ್‌ನ ಘನತೆ ಎತ್ತಿ ಹಿಡಿಯದ, ಮತ್ತೊಂದೆಡೆ ಮಹಿಳೆಯರನ್ನೂ ಗೌರವಿಸದ ಇಂತಹ ವ್ಯಕ್ತಿ ತಮ್ಮ ಪ್ರತಿನಿಧಿಯಾಗುವುದನ್ನು ಕಾಲ್ಕಾಜಿ ಕ್ಷೇತ್ರದ ಜನರು ಬಯಸುತ್ತಾರೆಯೇ?’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲಾಂಬಾ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬಿಧೂಡಿ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಧೂಡಿ ಅವರು ಈ ಹಿಂದೆ, ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ವಿರುದ್ಧ ಲೋಕಸಭೆಯಲ್ಲಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಅವರ ವಿರುದ್ಧ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಗೆ ದೂರು ನೀಡಲಾಗಿತ್ತು.
ರಮೇಶ್ ಬಿಧೂಡಿ ಬಹಿರಂಗವಾಗಿ ಕ್ಷಮೆ ಕೋರಬೇಕು. ಈ ವಿಚಾರ ಕುರಿತಂತೆ ಬಿಜೆಪಿಯ ಹಿರಿಯ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.– ಅಲ್ಕಾ ಲಾಂಬಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
‘ವಿರೋಧಿಗಳಿಗೆ ಅವರದೇ ಭಾಷೆಯಲ್ಲಿ ಉತ್ತರಿಸುವೆ’
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕ ರಮೇಶ್ ಬಿಧೂಡಿ ತಮ್ಮ ವಿರೋಧಿಗಳು ಬಳಸುವ ಭಾಷೆಯಲ್ಲಿಯೇ ಅವರಿಗೆ ಉತ್ತರ ನೀಡುವುದಾಗಿ ಹೇಳಿದರು. ದೆಹಲಿಯ ರೋಹಿಣಿ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ರ‍್ಯಾಲಿ ವೇಳೆ ಬಿಧೂಡಿ ಕೂಡ ವೇದಿಕೆಯಲ್ಲಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎಲ್ಲರಿಗೂ ಒಂದೇ ರೀತಿಯ ನಿಯಮಗಳಿರಬೇಕು. ಕಾಂಗ್ರೆಸ್ ನಾಯಕ ಪವನ್ ಖೇರಾ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ಕುರಿತು ಕೆಟ್ಟದಾಗಿ ಮಾತನಾಡಿದ್ದರು. ಹೀಗಾಗಿ ಅವರಿಗೆ (ಪ್ರತಿಸ್ಪರ್ಧಿಗಳಿಗೆ) ಅವರದೇ ಭಾಷೆಯಲ್ಲಿ ಉತ್ತರಿಸುವೆ’ ಎಂದರು.
‘ಪ್ರಿಯಾಂಕಾ ಗಾಂಧಿ ಅವರು ರಾಜಮನೆತನವೊಂದರ ಪುತ್ರಿ ಎಂಬ ಕಾರಣಕ್ಕೆ ನಾನು ಕ್ಷಮೆ ಯಾಚಿಸಬೇಕು. ಆದರೆ ಲಾಲು ಪ್ರಸಾದ್ ಕ್ಷಮೆ ಯಾಚಿಸಬಾರದೇ? ಇಬ್ಬರು ತಪ್ಪು ಮಾಡಿದಾಗ ಅದನ್ನು ಸರಿಪಡಿಸುವ ಕೆಲಸ ಇಬ್ಬರಿಂದಲೂ ಆಗಬೇಕೇ ಹೊರತು ಒಬ್ಬನಿಂದ ಅಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.