ADVERTISEMENT

ಸಂಸತ್ತಿನಲ್ಲಿ ಮದ್ಯ ಪ್ರದರ್ಶಿಸಿದ ದೆಹಲಿಯ ಬಿಜೆಪಿ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2021, 16:23 IST
Last Updated 6 ಡಿಸೆಂಬರ್ 2021, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಪ್ರವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಸೋಮವಾರ ಸಂಸತ್ತಿನಲ್ಲಿ ಮದ್ಯವನ್ನು ಪ್ರದರ್ಶಿಸಿರುವುದನ್ನು ಸುದ್ದಿ ಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ ಸಂಸದರು, ದೆಹಲಿ ಸರ್ಕಾರವು ಮದ್ಯ ಸೇವನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು.

'ಕೋವಿಡ್‌ನಿಂದಾಗಿ 25,000 ಮಂದಿ ಮೃತಪಟ್ಟಿದ್ದಾರೆ. ಆದರೆ ದೆಹಲಿಯ ಸರ್ಕಾರವು ಮದ್ಯದ ಬಳಕೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಹೊಸ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ನಿರತವಾಗಿದೆ' ಎಂದು ಎಎನ್‌ಐಗೆ ಪ್ರತಿಕ್ರಿಯಿಸಿದರು.

'ಇಂದು 824 ಹೊಸ ಮದ್ಯದ ಅಂಗಡಿಗಳನ್ನು ತೆರೆಯಲಾಗಿದೆ. ಜನವಸತಿ ಪ್ರದೇಶ, ಕಾಲನಿ, ಗ್ರಾಮಗಳಲ್ಲಿ ಮಂದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಮುಂಜಾನೆ 3 ಗಂಟೆಯ ವರೆಗೆ ಮದ್ಯದ ಅಂಗಡಿ ತೆರೆದಿರುತ್ತದೆ. ಬಾರ್‌ನಲ್ಲಿ ಮಹಿಳೆಯರು ಮುಂಜಾನೆ 3 ಗಂಟೆಯ ವರೆಗೆ ಮದ್ಯಪಾನ ಮಾಡಿದರೆ ರಿಯಾಯಿತಿ ನೀಡಲಾಗುತ್ತದೆ. ಮದ್ಯ ಸೇವನೆಯ ಪ್ರಾಯ ಮಿತಿಯನ್ನು 25ರಿಂದ 21ಕ್ಕೆ ಇಳಿಸಲಾಗಿದೆ' ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ತಮ್ಮ ಪ್ರಚಾರಕ್ಕಾಗಿ ಗರಿಷ್ಠ ಆದಾಯ ಗಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ. 2022ರ ವಿಧಾನಸಬೆ ಚುನಾವಣಾ ಪ್ರಚಾರಕ್ಕಾಗಿ ಪಂಜಾಬ್‌ಗೆ ತೆರಳಿರುವ ಕೇಜ್ರಿವಾಲ್, ಮದ್ಯಸೇವನೆಯ ವಿರುದ್ಧ ಭಾಷಣ ಮಾಡುತ್ತಾರೆ. ಇನ್ನೊಂದೆಡೆ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಸೇವನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದುಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.