ADVERTISEMENT

ದೆಹಲಿ ಸ್ಫೋಟ | ತನಿಖೆಗೆ ಸಹಕಾರ: ವೈದ್ಯರ ಕೃತ್ಯಗಳ ಜತೆ ಸಂಬಂಧವಿಲ್ಲ;ಫಲಾಹ್ ವಿ.ವಿ

ಪಿಟಿಐ
Published 12 ನವೆಂಬರ್ 2025, 14:30 IST
Last Updated 12 ನವೆಂಬರ್ 2025, 14:30 IST
<div class="paragraphs"><p>ಅಲ್– ಫಲಾಹ್‌ ವಿಶ್ವವಿದ್ಯಾಲಯ</p></div>

ಅಲ್– ಫಲಾಹ್‌ ವಿಶ್ವವಿದ್ಯಾಲಯ

   

ಫರಿದಾಬಾದ್‌: ‘ದೆಹಲಿ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ವೈದ್ಯರ ಕೃತ್ಯಗಳೊಂದಿಗೆ ವಿಶ್ವವಿದ್ಯಾಲಯ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ’ ಎಂದು ಅಲ್– ಫಲಾಹ್‌ ವಿಶ್ವವಿದ್ಯಾಲಯ ಬುಧವಾರ ಹೇಳಿದೆ. 

‘ಸ್ಫೋಟವನ್ನು ನಾವು ಖಂಡಿಸುತ್ತೇವೆ. ಈ ದುರದೃಷ್ಟಕರ ಬೆಳವಣಿಗೆಯಿಂದ ತೀವ್ರ ನೋವಾಗಿದೆ. ಈ ದುರ್ಘಟನೆಯಿಂದ ಬಾಧಿತರಾದ ಮುಗ್ಧ ಜನರ ಪರ ಪ್ರಾರ್ಥಿಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಭೂಪಿಂದರ್‌ ಕೌರ್‌ ಆನಂದ್‌ ತಿಳಿಸಿದ್ದಾರೆ. 

ADVERTISEMENT

‘ಬಂಧಿತ ವೈದ್ಯರು ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ಅವರ ಈ ಅಧಿಕೃತ ಕೆಲಸವನ್ನು ಹೊರತುಪಡಿಸಿ, ಇತರ ಕೃತ್ಯಗಳೊಂದಿಗೆ ವಿ.ವಿ ಸಂಬಂಧ ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

‘ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ವಿಷಯದಲ್ಲಿ ತಾರ್ಕಿಕ, ನ್ಯಾಯಯುತ ಮತ್ತು ನಿರ್ಣಾಯಕ ನಿರ್ಧಾರಕ್ಕೆ ಬರಲು ತನಿಖಾ ಅಧಿಕಾರಿಗಳಿಗೆ ವಿಶ್ವವಿದ್ಯಾಲಯವು ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕೆಂಪುಕೋಟೆ ಬಳಿ 12 ಜನರ ಸಾವಿಗೆ ಕಾರಣವಾದ ಸ್ಫೋಟದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಡಾ. ಉಮರ್‌ ನಬಿ ಮತ್ತು ಬಂಧಿತ ಡಾ. ಮುಜಮ್ಮಿಲ್‌ ಗನಿ ಈ ವಿಶ್ವವಿದ್ಯಾಲಯ ಬೋಧಕರಾಗಿದ್ದರು.

ಖಾಸಗಿ ವಿ.ವಿ: ಹರಿಯಾಣದ ಫರಿದಾಬಾದ್‌ ಜಿಲ್ಲೆಯಲ್ಲಿ ಮುಸ್ಲಿಂ ಪ್ರಾಬಲ್ಯವುಳ್ಳ ಧೌಜ್‌ ಗ್ರಾಮದಲ್ಲಿ 76 ಎಕರೆ ವಿಸ್ತಾರವಾದ ಕ್ಯಾಂಪಸ್‌ ಅನ್ನು ಅಲ್‌– ಫಲಾಹ್‌ ವಿಶ್ವವಿದ್ಯಾಲಯ ಹೊಂದಿದೆ.  ಇದು ಹರಿಯಾಣದ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಯಡಿ ಸ್ಥಾಪಿತವಾದ ವಿ.ವಿ. ಅದರ ಕ್ಯಾಂಪಸ್‌ನಲ್ಲಿ 650 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸಹ ಇದೆ.   

ಇದು ಪಾಕ್‌ ಬೆಂಬಲಿತ ಭಯೋತ್ಪಾದಕರ ಸೂಚನೆಗಳ ಮೇರೆಗೆ ಕಾರ್ಯ ನಿರ್ವಹಿಸುವ ವಿದ್ಯಾವಂತ ವ್ಯಕ್ತಿಗಳಿಗೆ ಹೇಗೆ ಸುರಕ್ಷಿತ ತಾಣವಾಯಿತು ಎಂಬುದರ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 

1997ರಲ್ಲಿ ಎಂಜಿನಿಯರಿಂಗ್‌ ಕಾಲೇಜು ಆಗಿ ಈ ವಿದ್ಯಾಸಂಸ್ಥೆ ಆರಂಭವಾಯಿತು. 2013ರಲ್ಲಿ ಅಲ್‌–ಫಲಾಹ್‌ ಎಂಜಿನಿಯರಿಂಗ್‌ ಕಾಲೇಜು ‘ನ್ಯಾಕ್‌’ನಿಂದ ‘ಎ’ ಗ್ರೇಡ್‌ ಮಾನ್ಯತೆ ಪಡೆಯಿತು. 2014ರಲ್ಲಿ ಹರಿಯಾಣ ಸರ್ಕಾರ ಇದಕ್ಕೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿತು. ಅಲ್‌–ಫಲಾಹ್‌ ವೈದ್ಯಕೀಯ ಕಾಲೇಜು ಕೂಡ ವಿಶ್ವವಿದ್ಯಾಲಯದ ಜತೆಗೆ ಸಂಯೋಜಿತವಾಗಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಗಳಿಗೆ ಅತ್ಯುತ್ತಮ ಪರ್ಯಾಯ ಸಂಸ್ಥೆಯಾಗಿ ಇದು ಬೆಳೆದಿತ್ತು ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.