
ನವದೆಹಲಿ: ಇಲ್ಲಿನ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಸರ್ವಪಕ್ಷ ಸಭೆ ಕರೆದು, ಚರ್ಚೆ ನಡೆಸಬೇಕು. ಜತೆಗೆ ಡಿಸೆಂಬರ್ 1ರಿಂದ ಪ್ರಾರಂಭವಾಗಲಿರುವ ಸಂಸತ್ ಚಳಿಗಾಲದ ಅಧಿವೇಶನವನ್ನು ಮುಂಚಿತವಾಗಿಯೇ ಆರಂಭಿಸಬೇಕು ಎಂದು ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ.
ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಅವರು ಈ ಬಗ್ಗೆ ಮಾತನಾಡಿ, ‘ಪೆಹಲ್ಗಾಮ್ ದಾಳಿಯ ಬಳಿಕ ಮುಂದಿನ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧ ಎಂದು ಪರಿಗಣಿಸಲಾಗುತ್ತದೆ ಎಂಬ ನೀತಿಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಈಗ ಅದೇ ನೀತಿಗೆ ಸರ್ಕಾರ ಬದ್ಧವಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಸ್ಫೋಟ ನಡೆದು 48 ಗಂಟೆಗಳಾದ ಬಳಿಕ ಕೇಂದ್ರ ಸಂಪುಟವು ಇದು ಭಯೋತ್ಪಾದಕ ಕೃತ್ಯ ಎಂಬುದನ್ನು ಹೇಳಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಮುಂಬೈ ದಾಳಿ ನಡೆದಾಗ ಅಂದಿನ ಗೃಹ ಸಚಿವರಾಗಿದ್ದ ಶಿವರಾಜ್ ಪಾಟಿಲ್ ಅವರು ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಸರ್ಕಾರದ ಯಾರಾದರು ಒಬ್ಬರು ಈ ಘಟನೆಯ ಹೊಣೆಗಾರಿಕೆ ಹೊರಲೇಬೇಕು’ ಎಂದೂ ಖೇರಾ ಆಗ್ರಹಿಸಿದ್ದಾರೆ.