ADVERTISEMENT

ಕಾರು ಸ್ಫೋಟಕ್ಕೂ ಮುನ್ನ ರಾಮಲೀಲಾ ಮೈದಾನದ ಮಸೀದಿಯ ಬಳಿ ಕಾಣಿಸಿಕೊಂಡಿದ್ದ ಡಾ.ಉಮರ್!

ಪಿಟಿಐ
Published 13 ನವೆಂಬರ್ 2025, 10:48 IST
Last Updated 13 ನವೆಂಬರ್ 2025, 10:48 IST
<div class="paragraphs"><p>ರಾಮಲೀಲಾ ಮೈದಾನದ ಬಳಿಯ ಮಸೀದಿ ಎದುರು&nbsp;ಡಾ. ಉಮರ್ ನಬಿ ಕಾಣಿಸಿಕೊಂಡಿದ್ದ ದೃಶ್ಯ</p></div>

ರಾಮಲೀಲಾ ಮೈದಾನದ ಬಳಿಯ ಮಸೀದಿ ಎದುರು ಡಾ. ಉಮರ್ ನಬಿ ಕಾಣಿಸಿಕೊಂಡಿದ್ದ ದೃಶ್ಯ

   

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಡಾ. ಉಮರ್ ನಬಿ, ರಾಮಲೀಲಾ ಮೈದಾನದ ಬಳಿಯ ಮಸೀದಿ ಎದುರು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಿರಿದಾದ ರಸ್ತೆಯಲ್ಲಿ ಉಮರ್ ನಬಿ ನೇರವಾಗಿ ನಡೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಆತ ಮುಖವನ್ನು ಬಲಕ್ಕೆ ತಿರುಗಿಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸ್ಫೋಟ ನಡೆಸುವುದಕ್ಕೂ ಮುನ್ನ ಉಮರ್, ಮಸೀದಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ನವೆಂಬರ್ 10ರಂದು (ಸೋಮವಾರ) ದೆಹಲಿಯ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಸ್ಫೋಟಗೊಂಡ ಕಾರನ್ನು ಓಡಿಸುತ್ತಿದ್ದ ಉಮರ್ ನಬಿ ಮಾಲೀಕತ್ವದ ಕೆಂಪು ಬಣ್ಣದ ‘ಫೋರ್ಡ್‌ ಎಕೋಸ್ಪೋರ್ಟ್‌’ ಕಾರನ್ನು ತೀವ್ರ ಶೋಧದ ಬಳಿಕ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಫರೀದಾಬಾದ್‌ ಬಳಿ ಕಾರು ಪತ್ತೆಯಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಂಡೈ ಐ20 ಕಾರಿನ ಜತೆಗೆ ‘ಫೋರ್ಡ್‌ ಎಕೋಸ್ಪೋರ್ಟ್‌’ ಕಾರನ್ನೂ ಸ್ಫೋಟಕ್ಕೆ ಬಳಸುವ ಸಂಚನ್ನು ಉಮರ್‌ ಮಾಡಿರಬಹುದು ಎಂಬ ಶಂಕೆಯಿದೆ. ಈ ದಿಸೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಘಟನೆ ನಡೆದ ದಿನದಂದು ದೆಹಲಿಯಾದ್ಯಂತ ದಾಖಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಸ್ಫೋಟಕಗಳಿಂದ ತುಂಬಿದ್ದ ಐ20 ಕಾರನ್ನು ಉಮರ್ ಚಲಾಯಿಸುತ್ತಿದ್ದನೆಂದು ಶಂಕಿಸಲಾಗಿದೆ. ಸೋಮವಾರ ಸಂಜೆ 6.52ಕ್ಕೆ ಸ್ಫೋಟ ಸಂಭವಿಸಿತ್ತು. ಇದಕ್ಕೂ ಮುನ್ನ 3.19ಕ್ಕೆ ಉಮರ್ ಕಾರನ್ನು ಕೆಂಪುಕೋಟೆ ಬಳಿಯ ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ. ಬಳಿಕ 6:28ಕ್ಕೆ ಅಲ್ಲಿಂದ ಹೊರಟ್ಟಿದ್ದ. ಇದಾದ 24 ನಿಮಿಷಗಳ ಬಳಿಕ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ಸ್ಫೋಟಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.