ADVERTISEMENT

ದೆಹಲಿ | ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟ: ಕೆಂಪುಕೋಟೆ ಬಳಿ ರಕ್ತದೋಕುಳಿ

ಎಂಟು ಮಂದಿ ಸಾವು, 24 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 19:56 IST
Last Updated 10 ನವೆಂಬರ್ 2025, 19:56 IST
<div class="paragraphs"><p>ಸ್ಫೋಟ ಸಂಭವಿಸಿದ ಸ್ಥಳ</p></div>

ಸ್ಫೋಟ ಸಂಭವಿಸಿದ ಸ್ಥಳ

   

ಕೃ‍ಪೆ: ಪಿಟಿಐ

ನವದೆಹಲಿ: ಸದಾ ಜನದಟ್ಟಣೆಯಿಂದ ಕೂಡಿರುವ ಐತಿಹಾಸಿಕ ಕೆಂಪುಕೋಟೆಯ ಬಳಿ ಸಂಚಾರ ಸಿಗ್ನಲ್‌ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. 

ADVERTISEMENT

ಜನರು ತಮ್ಮ ಕಚೇರಿಗಳಿಂದ ಮತ್ತು ಚಾಂದಿನಿ ಚೌಕ್ ಮಾರುಕಟ್ಟೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವು ನೋವುಗಳು ಹೆಚ್ಚಾಗುವ ಅಪಾಯ ಇದೆ.  ಘಟನೆಯಿಂದ ಗಾಯಗೊಂಡವರನ್ನು ಸಮೀಪದ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಧಾವಿಸಿದ್ದಾರೆ. ಘಟನೆ ಬಗ್ಗೆ ಶಾ ಅವರಿಂದ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದು ಸೂಕ್ತ ನಿರ್ದೇಶನಗಳನ್ನು ನೀಡಿದರು. ‘ಈ ಕೃತ್ಯದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಒತ್ತಾಯಿಸಿವೆ. 

ನಿಷೇಧಿತ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಮತ್ತು ಅನ್ಸಾರ್‌ ಗಜ್ವತ್‌–ಉಲ್–ಹಿಂದ್‌ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಉಗ್ರ ಜಾಲಯನ್ನು ಪೊಲೀಸರು ಬೇಧಿಸಿದ ಕೆಲವೇ ಗಂಟೆಗಳಲ್ಲಿ ಈ ಸ್ಫೋಟ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಅದರ ಕಂಪನವು ಸುತ್ತಲಿನ ಕಟ್ಟಡಗಳನ್ನು ಅಲುಗಾಡಿಸುವಷ್ಟಿತ್ತು. 

ಘಟನೆಯ ಬೆನ್ನಲ್ಲೇ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸ್ಥಳಕ್ಕೆ 10 ಅಗ್ನಿಶಾಮಕ ದಳದ ವಾಹನಗಳು ಧಾವಿಸಿದ್ದು, ಬೆಂಕಿಯನ್ನು ಅರ್ಧ ಗಂಟೆಯೊಳಗೆ ಶಮನಗೊಳಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಯೊಬ್ಬರ ಪ್ರಕಾರ, ಆರು ಕಾರುಗಳು, ಎರಡು ಇ–ರಿಕ್ಷಾಗಳು ಮತ್ತು ಒಂದು ಆಟೋ ರಿಕ್ಷಾ ಬೆಂಕಿಗೆ ಆಹುತಿಯಾಗಿವೆ. ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ, ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿವೆ. ಕೆಲ ಕಿಲೋಮೀಟರ್ ದೂರದಲ್ಲಿದ್ದ ಐಟಿಓವರೆಗೆ ಸ್ಫೋಟದ ಶಬ್ದ ಕೇಳಿಸಿದೆ ಎನ್ನಲಾಗಿದೆ. 

ದೆಹಲಿ ನಗರದಾದ್ಯಂತ ಬಿಗಿ ಭದ್ರತೆ ನಿಯೋಜಿಸಲಾಗಿದೆ ಮತ್ತು ನೆರೆ ರಾಜ್ಯ ಉತ್ತರ ಪ್ರದೇಶದಲ್ಲಿ ಕೂಡ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ನಗರಕ್ಕೆ ಪ್ರವೇಶಿಸುವ ಮತ್ತು ಹೊರ ಹೋಗುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. 

ದೆಹಲಿ ಪೊಲೀಸ್, ವಿಧಿವಿಜ್ಞಾನ ತಂಡ, ರಾಷ್ಟ್ರೀಯ ತನಿಖಾ ದಳ, ಎನ್‌ಎಸ್‌ಜಿ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳು ಸ್ಥಳದಲ್ಲಿದ್ದು ತನಿಖೆಯಲ್ಲಿ ತೊಡಗಿವೆ. ಕಾರಿನ ಮಾಲೀಕನ ಗುರುತು ಪತ್ತೆಯಾಗಿದೆ ಹಾಗೂ ನಂಬರ್ ಪ್ಲೇಟ್‌ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಚಾಂದಿನಿ ಚೌಕ್ ಮಾರುಕಟ್ಟೆಯನ್ನು ಮಂಗಳವಾರ ಮುಚ್ಚಲಾಗುವುದು ಎಂದು ಮಾರುಕಟ್ಟೆ ಸಂಘದ ಅಧ್ಯಕ್ಷ ಸಂಜಯ್ ಭಾರ್ಗವ್ ಹೇಳಿದ್ದಾರೆ.

ಅವಘಡದಲ್ಲಿ ಉಗ್ರರ ಕೈವಾಡವಿದೆಯೇ ಎನ್ನುವುದು ಸೇರಿದಂತೆ ಎಲ್ಲ ಆಯಾಮಗಳಿಂದಲೂ ಸಮಗ್ರವಾದ ತನಿಖೆಯನ್ನು ನಡೆಸಲಾಗುತ್ತಿದೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ
ಜನನಿಬಿಡ ಪ್ರದೇಶದಲ್ಲಿ ನಡೆದ ಈ ಅವಘಡ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಸ್ಫೋಟದ ಸ್ಥಳವು ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಗೇಟ್ 1ರ ಸಮೀಪದಲ್ಲಿದೆ. ಇದು ದೆಹಲಿ ಗೇಟ್‌ನಿಂದ ಕಾಶ್ಮೀರಿ ಗೇಟ್‌ಗೆ ಸಂಪರ್ಕಿಸುವ ರಸ್ತೆಯಲ್ಲಿದೆ. ಈ ಪ್ರದೇಶವು ಚಾಂದಿನಿ ಚೌಕ್‌ಗೆ ಹೋಗುವ ರಸ್ತೆಯ ಎದುರು ಮತ್ತು ಜಾಮಾ ಮಸೀದಿಯಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿದೆ.

ಸ್ಫೋಟ ಸಂಭವಿಸಿದ ಕಾರಿನೊಳಗೆ ಸುಮಾರು 2-3 ಜನರು ಕುಳಿತಿದ್ದರು ಎಂದು ದೆಹಲಿ ಪೊಲೀಸ್ ಕಮಿಷನರ್‌ ಸತೀಶ್ ಗೋಲ್ಚಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.