ADVERTISEMENT

Farmers protest | ಸಮಸ್ಯೆಗಳಿಗೆ ಗಲಭೆ ಪರಿಹಾರವಲ್ಲ, ಮಾತುಕತೆಗೆ ಬನ್ನಿ: ಠಾಕೂರ್

ಪಿಟಿಐ
Published 14 ಫೆಬ್ರುವರಿ 2024, 4:22 IST
Last Updated 14 ಫೆಬ್ರುವರಿ 2024, 4:22 IST

ನವದೆಹಲಿ: ಗಲಭೆ ಹಾಗೂ ವಿದ್ವಂಸಕ ಕೃತ್ಯಗಳಿಂದ ಯಾವ ಸಮಸ್ಯೆಗೂ ಪರಿಹಾರ ಸಿಗದು. ಬೇಡಿಕೆಗಳ ಕುರಿತು ಮಾತುಕತೆಗೆ ಬನ್ನಿ ಎಂದು 'ದೆಹಲಿ ಚಲೋ' ಪ್ರತಿಭಟನಾನಿರತ ರೈತರಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್‌ ಕರೆ ನೀಡಿದ್ದಾರೆ.

ಮಾಧ್ಯಮದವರನ್ನುದ್ದೇಶಿಸಿ ಮಂಗಳವಾರ ಮಾತನಾಡಿರುವ ಠಾಕೂರ್, ರಾಷ್ಟ್ರ ರಾಜಧಾನಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತ ಸಂಘಟನೆಗಳ ಕೆಲವು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ, ವಿಶ್ವ ವ್ಯಾಪಾರ ಸಂಘಟನೆಯಿಂದ  (ಡಬ್ಲ್ಯುಟಿಒ) ಭಾರತ ಹೊರಬರಬೇಕು ಮತ್ತು ಮೂರು ವಾಣಿಜ್ಯ ಒಪ್ಪಂದಗಳನ್ನು (ಎಫ್‌ಟಿಎ) ರದ್ಧು ಮಾಡಬೇಕು ಎಂಬ ಒತ್ತಾಯಕ್ಕೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

'ಡಬ್ಲ್ಯುಟಿಒದಿಂದ ಭಾರತ ಹೊರಬರಬೇಕು, ಎಫ್‌ಟಿಎ ರದ್ದುಮಾಡಬೇಕು, ಸ್ಮಾರ್ಟ್‌ ಮೀಟರ್‌ಗಳನ್ನು ಸ್ಥಗಿತಗೊಳಿಸಿ, ವಿದ್ಯುತ್‌ ಕಾಯ್ದೆಯಿಂದ ರೈತರಿಗೆ ವಿನಾಯಿತಿ ನೀಡಬೇಕು ಎಂಬ ಬೇಡಿಕೆಗಳ ಬಗ್ಗೆ ಕೇಂದ್ರವು ಇತರ ಭಾಗೀದಾರರೊಂದಿಗೆ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಬಾರದೇ?' ಎಂದು ಕೇಳಿದ್ದಾರೆ.

ADVERTISEMENT

ಸಂಘಟನೆಗಳೊಂದಿಗೆ ಸೋಮವಾರ ನಡೆಸಿದ ಸಭೆ ವೇಳೆ, ಸಮಿತಿ ರಚಿಸುವ ಕುರಿತು ಸರ್ಕಾರ ಪ್ರಸ್ತಾಪಿಸಿತ್ತು ಎಂದಿರುವ ಠಾಕೂರ್‌, 'ನಾವು (ಸರ್ಕಾರ) ಇತರರೊಟ್ಟಿಗೆ ಮಾತನಾಡಿದ ಬಳಿಕವಷ್ಟೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯ' ಎಂದು ಸ್ಪಷ್ಟಪಡಿಸಿದ್ದಾರೆ.

ಕತಾರ್‌ನಲ್ಲಿ ಬಂಧನಕ್ಕೊಳಗಾಗಿದ್ದ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ನರೇಂದ್ರ ಮೋದಿ ಸರ್ಕಾರವು ವಾಪಸ್‌ ಕರೆದುಕೊಂಡು ಬಂದಿದೆ ಎಂದಮೇಲೆ, ಸಭೆ ನಡೆಸಿ ರೈತರ ಸಮಸ್ಯೆಗಳನ್ನೂ ಬಗೆಹರಿಸಬಹುದಾಗಿದೆ. ಮೋದಿ ಸರ್ಕಾರವು ಸದಾ ರೈತರ ಪರವಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವುದಕ್ಕಾಗಿ ಹಿಂದಿನ ಯುಪಿಎ ಸರ್ಕಾರ ವ್ಯಯಿಸಿದ್ದಕ್ಕಿಂತ ಹೆಚ್ಚು ಹಣವನ್ನು ನಮ್ಮ ಸರ್ಕಾರ ಖರ್ಚುಮಾಡಿದೆ ಎಂದಿದ್ದಾರೆ.

'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ, ರೈತರ ಬೇಡಿಕೆಯಂತೆ ಎಂಎಸ್‌ಪಿಗೆ ಕಾನೂನು ಖಾತ್ರಿ ನೀಡಲಾಗುವುದು ಎಂದು ಕಾಂಗ್ರೆಸ್‌ ಹೇಳಿರುವುದಕ್ಕೆ ಠಾಕೂರ್‌ ಕಿಡಿಕಾರಿದ್ದಾರೆ.

'ರಾಹುಲ್‌ ಗಾಂಧಿ ಮತ್ತೊಮ್ಮೆ ಸುಳ್ಳು ಹೇಳಿದ್ದು, ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. 60 ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಆಗ ಕಾನೂನು ರೂಪಿಸದಂತೆ ಅವರನ್ನು ತಡೆದಿದ್ದವರು ಯಾರು' ಎಂದು ಚಾಟಿ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.