ADVERTISEMENT

ಛತ್ತೀಸಗಢ ವಿಧಾನಸಭೆ ಚುನಾವಣೆ: 11 ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟಿಸಿದ ಎಎಪಿ

ಪಿಟಿಐ
Published 13 ಅಕ್ಟೋಬರ್ 2023, 9:39 IST
Last Updated 13 ಅಕ್ಟೋಬರ್ 2023, 9:39 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ರಾಯಪುರ: ಮುಂದಿನ ತಿಂಗಳು ನಡೆಯುವ ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ 11 ಅಭ್ಯರ್ಥಿಗಳನ್ನೊಳಗೊಂಡ ಮೂರನೇ ಪಟ್ಟಿಯನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಬಿಡುಗಡೆ ಮಾಡಿದೆ.

ಇದರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಯು 33 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.

ADVERTISEMENT

90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಗೆ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಇಲ್ಲಿ ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದೆ.

'ಪ್ರಕಟಣೆ! ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಮೂರನೇ ಪಟ್ಟಿ ಇಲ್ಲಿದೆ. ಎಲ್ಲ ಅಭ್ಯರ್ಥಿಗಳಿಗೆ ಶುಭವಾಗಲಿ. ಈ ಬಾರಿ ಪೊರಕೆ ಗುಡಿಸಿಹಾಕುತ್ತದೆ' ಎಂದು ಎಎಪಿ ಎಕ್ಸ್‌ನಲ್ಲಿ (ಟ್ವಿಟರ್‌) ಪಟ್ಟಿ ಹಂಚಿಕೊಂಡಿದೆ.

ಘೋಷಣೆಯಾಗಿರುವ 11 ಕ್ಷೇತ್ರಗಳ ಪೈಕಿ ತಲಾ ಒಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಾಗಿವೆ.

ಎಎಪಿಯು ರಾಜ್ಯದಲ್ಲಿ 2018ರ ಚುನಾವಣೆಯಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ ನಡೆಸಿತ್ತು. ಆದರೆ, 85 ಕ್ಷೇತ್ರಗಳಲ್ಲಿ ಕಣಕ್ಕಿಳಿದರೂ ಖಾತೆ ತೆರೆಯಲು ವಿಫಲವಾಗಿತ್ತು.

ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಅಧಿಕಾರದಲ್ಲಿದೆ. ಮುಂಬರುವ ಮಧ್ಯಪ್ರದೇಶ, ಛತ್ತೀಸಗಢ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿಯೂ ಪೂರ್ಣ ಸಾಮರ್ಥ್ಯದೊಂದಿಗೆ ಕಣಕ್ಕಿಳಿಯಲಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಕೇಜ್ರಿವಾಲ್ ಸೋಮವಾರ ಹೇಳಿದ್ದರು.

ಬಿಜೆಪಿ ಇದುವರೆಗೆ 85 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ನವೆಂಬರ್‌ 7ರಿಂದ 30ರ ವರೆಗೆ ಒಟ್ಟು ಐದು (ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ) ರಾಜ್ಯಗಳಿಗೆ ವಿಧಾನಸಭೆ ಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.