ADVERTISEMENT

ಹಗರಣಗಳ ನಡುವೆಯೂ ತಮ್ಮನ್ನು ತಾವು ಪ್ರಾಮಾಣಿಕ ಎಂದುಕೊಳ್ಳುವ ಕೇಜ್ರಿವಾಲ್: ಬಿಜೆಪಿ

ಪಿಟಿಐ
Published 26 ನವೆಂಬರ್ 2022, 11:01 IST
Last Updated 26 ನವೆಂಬರ್ 2022, 11:01 IST
ಅರವಿಂದ ಕೇಜ್ರಿವಾಲ್‌ ಹಾಗೂ ಬಿಜೆಪಿ ಬಾವುಟ
ಅರವಿಂದ ಕೇಜ್ರಿವಾಲ್‌ ಹಾಗೂ ಬಿಜೆಪಿ ಬಾವುಟ   

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಹಲವು ಹಗರಣಗಳು ನಡೆದಿದ್ದರೂ ತಮ್ಮನ್ನು ತಾವು ಪ್ರಾಮಾಣಿಕ ಎಂದು ಪ್ರಮಾಣಪತ್ರ ಕೊಟ್ಟುಕೊಂಡಿದ್ದಾರೆ. ಅವರ ಕಣ್ಣಿಗೆ ರಾಜಕೀಯದ ಪೊರೆ ಆವರಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು, ಕೇಜ್ರಿವಾಲ್ 'ಅತ್ಯಂತ ಅಪ್ರಮಾಣಿಕ' ಎಂಬುದು ಈಗ ಇಡೀ ದೇಶಕ್ಕೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಮೊದಲ ದೋಷಾರೋಪ ಪಟ್ಟಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಹೊರತುಪಡಿಸಿ ಇತರ ಆರು ಮಂದಿ ವಿರುದ್ಧ ಆರೋಪ ಮಾಡಲಾಗಿದೆ. ಇದನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದ ಕೇಜ್ರಿವಾಲ್‌ ಅವರು, ತಮ್ಮ ಸರ್ಕಾರ ಹಾಗೂ ಆಮ್‌ ಆದ್ಮಿ ಪಕ್ಷ (ಎಎಪಿ) 'ಅತ್ಯಂತ ಪ್ರಮಾಣಿಕ'ವಾದದ್ದು ಎಂದು ಪ್ರತಿಕ್ರಿಯಿಸಿದ್ದರು.

ADVERTISEMENT

ಇದಕ್ಕೆ ತಿರುಗೇಟು ನೀಡಿರುವ ಭಾಟಿಯಾ, 'ಕೇಜ್ರಿವಾಲ್‌ ಅವರಕಣ್ಣಿಗೆ ರಾಜಕೀಯದ ಪೊರೆ ಆವರಿಸಿದೆ. ಶಾಲಾ ಕೊಠಡಿಗಳ ನಿರ್ಮಾಣದಲ್ಲಿನ ಅಕ್ರಮ, ಅಬಕಾರಿ ಹಗರಣ ಅಕ್ರಮ ಅಥವಾ ಜೈಲು ಸೇರಿದ್ದರೂ ಸತ್ಯೇಂದ್ರ ಜೈನ್‌ ಸಚಿವ ಸ್ಥಾನ ಉಳಿಸಿಕೊಂಡಿರುವುದು ಅವರಿಗೆ ದೊಡ್ಡ ವಿಚಾರಗಳೇ ಅಲ್ಲ' ಎಂದು ಕುಟುಕಿದ್ದಾರೆ.

ಸಿಬಿಐ ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ವಿಜಯ್‌ ನಾಯರ್‌,ಅಭಿಷೇಕ್‌ ಬೊಯಿನಪಲ್ಲಿ, ಸಮೀರ್ ಮಹೇಂದ್ರು, ಅರಣ್ ರಾಮಚಂದ್ರ ಪಿಳ್ಳೈ, ಮೂಥಾ ಗೌತಮ್, ಅಬಕಾರಿ ಇಲಾಖೆಯ ಉಪ ಆಯುಕ್ತರಾಗಿದ್ದ ಕುಲದೀಪ್ ಸಿಂಗ್, ಸಹಾಯಕ ಕಮೀಷನರ್ ಆಗಿದ್ದ ನರೇಂದ್ರ ಸಿಂಗ್ ಅವರನ್ನು ಆರೋಪಿಗಳೆಂದು ಉಲ್ಲೇಖಿಸಿದೆ.

ಇದೇ ಪ್ರಕರಣದಲ್ಲಿಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವೂ (ಇ.ಡಿ) ಇಂದು (ನ.26) ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಹಾಗೂ ಇನ್ನಿಬ್ಬರ ವಿರುದ್ಧ ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.