ನರೇಂದ್ರ ಮೋದಿ, ರೇಖಾ ಗುಪ್ತಾ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿದಿರುವ ಕಮಲ ಪಾಳಯವು ನೂತನ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶನದ ವೇದಿಕೆಯನ್ನಾಗಿ ಪರಿವರ್ತಿಸಿತು. ರಾಮಲೀಲಾ ಮೈದಾನದಲ್ಲಿ ಗುರುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಸಂಪುಟದ ಆರು ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಸುಮಾರು 50 ಸಾವಿರ ಜನರು ಸೇರಿದ್ದ ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಉನ್ನತ ನಾಯಕರು ಮತ್ತು ಎನ್‌ಡಿಎ ನಾಯಕರು ಭಾಗವಹಿಸಿದ್ದರು. ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್, ಚಂದ್ರಬಾಬು ನಾಯ್ಡು, ಗೋವಾದ ಪ್ರಮೋದ್ ಸಾವಂತ್, ಹರಿಯಾಣದ ನಾಯಬ್ ಸಿಂಗ್ ಸೈನಿ ಮತ್ತು ಮೇಘಾಲಯದ ಕಾನ್ರಾಡ್ ಸಂಗ್ಮಾ ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್, ಅತಿಶಿ ಸೇರಿದಂತೆ ಎಎಪಿಯ ಯಾವುದೇ ನಾಯಕರು ಸಮಾರಂಭದಲ್ಲಿ ಭಾಗಿಯಾಗಲಿಲ್ಲ.
ರೇಖಾ ಗುಪ್ತಾ ಅವರು ದೆಹಲಿಯ ಒಂಬತ್ತನೇ ಮುಖ್ಯಮಂತ್ರಿ. ಮಹಿಳೆಯಲ್ಲಿ ಈ ಗಾದಿಗೆ ಏರಿದವರಲ್ಲಿ ನಾಲ್ಕನೇಯವರು. ಎನ್‌ಡಿಎ ಮೈತ್ರಿಕೂಟದ ಏಕೈಕ ಮಹಿಳಾ ಮುಖ್ಯಮಂತ್ರಿ. ಪ್ರಸ್ತುತ ದೇಶದಲ್ಲಿರುವ ಎರಡನೇ ಮಹಿಳಾ ಮುಖ್ಯಮಂತ್ರಿ. ಮತ್ತೊಬ್ಬರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ.
ನೂತನ ಸಂಪುಟದಲ್ಲಿ ಬಿಜೆಪಿಯು ಎಲ್ಲ ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಪ್ರಯತ್ನ ಮಾಡಿದೆ. ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿರುವ ಪರ್ವೇಶ್ ವರ್ಮಾ, ಪ್ರಬಲ ಹಿಂದುತ್ವದ ಪ್ರತಿಪಾದಕ ಕಪಿಲ್ ಮಿಶ್ರಾ, ಬಿಜೆಪಿಯ ಸಿಖ್ ಮುಖ ಮಂಜಿಂದರ್ ಸಿಂಗ್ ಸಿರ್ಸಾ, ಹಿರಿಯ ನಾಯಕ ಅಶಿಶ್ ಸೂದ್, ರವೀಂದರ್ ಇಂದ್ರಜ್ ಸಿಂಗ್ ಮತ್ತು ಪಂಕಜ್ ಸಿಂಗ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಗುಪ್ತಾ ಅವರು ವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದರೂ, ಸಚಿವರಲ್ಲಿ ಜಾಟ್, ಸಿಖ್, ದಲಿತ, ಬ್ರಾಹ್ಮಣ, ಪಂಜಾಬಿಗಳು ಇದ್ದಾರೆ. ಇಬ್ಬರು ಪೂರ್ವಾಂಚಲಿಗಳು.
ಆರು ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವಾಗ ಪಕ್ಷವು ಹಲವಾರು ಅಂಶಗಳನ್ನು ಪರಿಗಣಿಸಿದೆ. ಹಿರಿಯ ನಾಯಕರಾದ ವಿಜೇಂದರ್ ಗುಪ್ತಾ ಮತ್ತು ಮೋಹನ್ ಸಿಂಗ್ ಬಿಸ್ತ್ ಮುಂದಿನ ಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷರಾಗುವ ಸಾಧ್ಯತೆ ಇದೆ.
ನೂತನ ಮುಖ್ಯಮಂತ್ರಿಯನ್ನು ಅಭಿನಂದಿಸಿದ ನರೇಂದ್ರ ಮೋದಿ, ‘ಬಿಜೆಪಿ ಸರ್ಕಾರವು ನಗರದ ಅಭಿವೃದ್ಧಿಗೆ ಸಂಪೂರ್ಣ ಹುರುಪಿನಿಂದ ಕೆಲಸ ಮಾಡಲಿದೆ’ ಎಂದರು.
ರೇಖಾ ಗುಪ್ತಾ ಮಾತನಾಡಿ, ‘ಅರ್ಹ ಮಹಿಳೆಯರಿಗೆ ತಿಂಗಳಿಗೆ ₹2,500 ನೆರವು ನೀಡುವ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಲಿದೆ. ಮೊದಲ ಕಂತನ್ನು ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಜಮಾ ಮಾಡಲಾಗುತ್ತದೆ. ಜತೆಗೆ, ಕಳೆದ 10 ವರ್ಷಗಳಲ್ಲಿನ ಎಎಪಿ ಸರ್ಕಾರದ ಅಕ್ರಮಗಳನ್ನು ಪತ್ತೆ ಹಚ್ಚಿ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದರು. ‘ಪ್ರತಿ ಪೈಸೆಗೂ ಅವರು ಜನರಿಗೆ ಲೆಕ್ಕ ನೀಡಬೇಕಾಗುತ್ತದೆ’ ಎಂದು ಅವರು ಹೇಳಿದರು.
‘ಮೋದಿ ಅವರ ಕನಸನ್ನು ನನಸಾಗಿಸುವುದು ರಾಜಧಾನಿಯಲ್ಲಿರುವ ಎಲ್ಲ 48 ಬಿಜೆಪಿ ಶಾಸಕರ ಜವಾಬ್ದಾರಿಯಾಗಿದೆ’ ಎಂದು ಅವರು ಹೇಳಿದರು.
ನಂತರ ಅವರು ದೆಹಲಿ ಸಚಿವಾಲಯದಲ್ಲಿ ಅಧಿಕಾರ ವಹಿಸಿಕೊಂಡರು. ಗುಪ್ತಾ ಹಾಗೂ ಸಂಪುಟದ ಸದಸ್ಯರು ವಾಸುದೇವ್ ಘಾಟ್‌ನಲ್ಲಿ 'ಯಮುನಾ ಆರತಿ' ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.