ದೆಹಲಿಯ ಯಮುನಾ ಆರತಿಯ ದೃಶ್ಯ
ಪಿಟಿಐ ಚಿತ್ರ
ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ರೇಖಾ ಗುಪ್ತಾ ಅವರು, ಸಂಜೆ ವಾಸುದೇವ ಘಾಟ್‌ಗೆ ಭೇಟಿ ನೀಡಿ ಅದ್ಧೂರಿ ಯಮುನಾ ಆರತಿಯಲ್ಲಿ ಪಾಲ್ಗೊಂಡರು.
ಗಂಗಾ ನದಿಯ ತಟದ ಹರಿದ್ವಾರ ಮತ್ತು ವಾರಾಣಸಿಯ ಹಲವು ಘಾಟ್‌ಗಳಲ್ಲಿ ನಿತ್ಯ ನಡೆಯುವ ಗಂಗಾ ಆರತಿ ಮಾದರಿಯಲ್ಲೇ ದೆಹಲಿಯ ಘಾಟ್‌ನಲ್ಲಿ ಯಮುನಾ ಆರತಿಯೂ ನಡೆಯುತ್ತದೆ. ಯಮುನಾ ನದಿಯ ಶುಚಿತ್ವವೇ ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು.
ರೇಖಾ ಗುಪ್ತಾ ಅವರು ಯಮುನಾ ನದಿ ತಟಕ್ಕೆ ಭೇಟಿ ನೀಡಿ ಆರತಿಯಲ್ಲಿ ಪಾಲ್ಗೊಂಡರು. ಇವರೊಂದಿಗೆ ಸಂಪುಟದ ಇತರ ಸಚಿವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇಖಾ, ‘ನಾವು ನುಡಿದಂತೆ ನಡೆಯುತ್ತೇವೆ. ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಯಮುನಾ ನದಿಯನ್ನು ದೆಹಲಿಯ ಹೆಗ್ಗುರುತನ್ನಾಗಿ ಮಾಡುವ ನಮ್ಮ ವಾಗ್ದಾನಕ್ಕೆ ನಾವು ಬದ್ಧ. ಇದು ಕಷ್ಟಕರ ಕೆಲಸವಲ್ಲ ಎನ್ನುವುದು ತಿಳಿದಿದೆ. ಎಷ್ಟಾದರೂ ಸಮಯ ತೆಗೆದುಕೊಳ್ಳಲಿ, ಎಷ್ಟು ಶ್ರಮವಾದರೂ ಬೇಡಲಿ. ನಮ್ಮಲ್ಲಿ ಬದ್ಧತೆ ಇದ್ದರೆ ಯಮುನೆಯೂ ನಮ್ಮನ್ನು ಹರಸುತ್ತಾಳೆ’ ಎಂದಿದ್ದಾರೆ.
ಯಮುನಾ ನದಿಯ ಪುನರುಜ್ಜೀವನ ಕಾರ್ಯ ಹಾಗೂ ಅಭಿವೃದ್ಧಿಗಾಗಿ ‘ಯಮುನಾ ಕೋಶ್’ ರಚಿಸುವುದಾಗಿ ಬಿಜೆಪಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ‘ವಿಕಸಿತ್ ಭಾರತ್ ಸಂಕಲ್ಪ್ ಪತ್ರ’ದಲ್ಲಿ ಹೇಳಿತ್ತು. ಇದಕ್ಕಾಗಿ ಗುರುವಾರ ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ರೇಖಾ ಗುಪ್ತಾ ಹೇಳಿರುವುದಾಗ ವರದಿಯಾಗಿದೆ.
70 ಸ್ಥಾನಗಳ ದೆಹಲಿ ವಿಧಾನಸಭೆಗೆ ಫೆ. 5ರಂದು ಚುನಾವಣೆ ನಡೆದಿತ್ತು. ಫೆ. 8ರಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಎರಡೂವರೆ ದಶಕದ ಬಳಿಕ ಅಧಿಕಾರಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.