ADVERTISEMENT

ದೆಹಲಿ ಕೋಚಿಂಗ್ ಕೇಂದ್ರ ದುರಂತ: ತನಿಖೆಗೆ ಸಮಿತಿ ರಚಿಸಿದ ಗೃಹ ಇಲಾಖೆ

ಪಿಟಿಐ
Published 29 ಜುಲೈ 2024, 16:27 IST
Last Updated 29 ಜುಲೈ 2024, 16:27 IST
<div class="paragraphs"><p>ನವದೆಹಲಿಯ ಓಲ್ಡ್ ರಾಜೇಂದ್ರ ನಗರದ ಕಟ್ಟಡಕ್ಕೆ ನೀರು ನುಗ್ಗಿದ ಪರಿಣಾಮ ಮೂವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದರು</p></div>

ನವದೆಹಲಿಯ ಓಲ್ಡ್ ರಾಜೇಂದ್ರ ನಗರದ ಕಟ್ಟಡಕ್ಕೆ ನೀರು ನುಗ್ಗಿದ ಪರಿಣಾಮ ಮೂವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದರು

   

ರಾಯಿಟರ್ಸ್ ಚಿತ್ರ

ನವದೆಹಲಿ: ನಾಗರಿಕ ಸೇವಾ ಪರೀಕ್ಷೆಗಳ ಮೂವರು ಆಕಾಂಕ್ಷಿಗಳ ಸಾವಿಗೆ ಕಾರಣವಾಗಿದ್ದ ಕೋಚಿಂಗ್ ಕೇಂದ್ರದೊಳಗೆ ನೀರು ನುಗ್ಗಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ, ತನಿಖೆಗೆ ಸಮಿತಿಯನ್ನು ರಚಿಸಿ ಸೋಮವಾರ ಆದೇಶಿಸಿದೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಇಲಾಖೆ, ‘ಸಮಿತಿಯು ಘಟನೆಗೆ ಕಾರಣವನ್ನು ಪತ್ತೆ ಮಾಡಲಿದೆ. ಇದಕ್ಕೆ ಹೊಣೆಯಾದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಿದೆ. ಇದಕ್ಕೊಂದು ಸ್ಪಷ್ಟ ನೀತಿ ರೂಪಿಸಲು ಅಗತ್ಯವಿರುವ ಸಲಹೆಗಳನ್ನು ನೀಡಲಿದೆ. ಇದಕ್ಕಾಗಿ 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ’ ಎಂದು ತಿಳಿಸಿದೆ.

‘ಈ ಸಮಿತಿಯಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ದೆಹಲಿ ಪೊಲೀಸ್‌ನ ಆಯುಕ್ತರು, ಅಗ್ನಿಶಾಮಕ ಸಲಹೆಗಾರರು ಹಾಗೂ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಇರಲಿದ್ದಾರೆ’ ಎಂದು ಎಕ್ಸ್‌ನಲ್ಲಿ ಹೇಳಿದೆ.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಗೆ ದೆಹಲಿಯ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ಸಿದ್ಧತೆ ನಡೆಸುತ್ತಿದ್ದ ಉತ್ತರ ಪ್ರದೇಶದ ಶ್ರೇಯಸ್ ಯಾದವ್, ತೆಲಂಗಾಣದ ತಾನ್ಯಾ ಸೋನಿ ಹಾಗೂ ಕೇರಳದ ನವೀನ್ ದಲ್ವಾನಿ ಅವರು ಪ್ರವಾಹ ನೀರಿನಲ್ಲಿ ಸಿಲುಕಿದ ಪರಿಣಾಮ ಮೃತಪಟ್ಟಿದ್ದಾರೆ. ಅತಿಯಾದ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹ, ಕೋಚಿಂಗ್ ಕೇಂದ್ರದ ನೆಲಮಾಳಿಗೆಯಲ್ಲಿದ್ದ ಗ್ರಂಥಾಲಯಕ್ಕೆ ನುಗ್ಗಿತ್ತು. ಇದರಲ್ಲಿ ಸಿಲುಕಿದ ಈ ಮೂವರು ಹೊರಬರಲಾಗದೆ ಮೃತಪಟ್ಟರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಮೃತ ವ್ಯಕ್ತಿಗಳ ಕುಟುಂಬಕ್ಕೆ ತಲಾ ₹10 ಲಕ್ಷ

ಘಟನೆ ನಂತರ ಮೃತ ವ್ಯಕ್ತಿಗಳ ಕುಟುಂಬಗಳನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸೆಕ್ಸೇನಾ ಭೇಟಿ ಮಾಡಿದ್ದು, ತಲಾ ₹10ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ 24 ಗಂಟೆಯೊಳಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ಐವರನ್ನು 14 ದಿನಗಳ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ. ತೇಜಿಂದರ್ ಸಿಂಗ್, ಪರ್ವಿಂದರ್ ಸಿಂಗ್, ಹರ್ವಿಂದರ್ ಸಿಂಗ್ ಹಾಗೂ ಸರ್ಬಜೀತ್ ಸಿಂಗ್ ಬಂಧಿತರು. 

13 ಕೋಚಿಂಗ್ ಕೇಂದ್ರಗಳಿಗೆ ಬೀಗ

ದೆಹಲಿಯ ಓಲ್ಡ್ ರಾಜೇಂದ್ರ ನಗರದ 13 ಕೋಚಿಂಗ್ ಕೇಂದ್ರಗಳು ಅಕ್ರಮ ಎಂದಿರುವ ಮಹಾನಗರ ಪಾಲಿಕೆ ಪ್ರಮುಖ ಕೇಂದ್ರಗಳಿಗೆ ಬೀಗ ಹಾಕಿದೆ. 

ಇವುಗಳಲ್ಲಿ ಮುಖ್ಯವಾಗಿ ಐಎಎಸ್ ಗುರುಕುಲ, ಚಾಹಲ್ ಅಕಾಡೆಮಿ, ಪ್ಲಟಸ್ ಅಕಾಡೆಮಿ, ಸಾಯಿ ಟ್ರೇಡಿಂಗ್, ಐಎಎಸ್ ಸೇತು, ಟಾಪರ್ಸ್ ಅಕಾಡೆಮಿ, ದೈನಿಕ್ ಸಾಮವಾದ್, ಸಿವಿಲ್ಸ್ ಡೈಲಿ ಐಎಎಸ್, ಕರಿಯರ್ ಪವರ್, 99 ನೋಟ್ಸ್‌, ವಿದ್ಯಾ ಗುರು, ಗೈಡೆನ್ಸ್ ಐಎಎಸ್, ಈಸಿ ಫಾರ್ ಐಎಎಸ್ ಹಾಗೂ ನವೀಕೃತ ದೃಷ್ಟಿ ಐಎಎಸ್ ಕೋಚಿಂಗ್ ಕೇಂದ್ರಕ್ಕೂ ಬೀಗ ಹಾಕಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಪರೀಕ್ಷೆಗಳ ಆಕಾಂಕ್ಷಿ, ‘ಘಟನೆಯಿಂದ ಗ್ರಂಥಾಲಯ ಬಳಕೆ ಸಾಧ್ಯವಾಗುತ್ತಿಲ್ಲ. ದೃಷ್ಟಿ ಐಎಎಸ್ ಕೋಚಿಂಗ್ ಕೇಂದ್ರಕ್ಕೂ ಪೊಲೀಸರು ಬಂದಿದ್ದು, ತರಗತಿಗಳು ನಡೆಯದೇ ತೊಂದರೆಯಾಗಿದೆ. ಇಲ್ಲಿ ತರಗತಿಗಳು ಕಟ್ಟಡದ ನೆಲಮಾಳಿಗೆಯಲ್ಲಿ ನಡೆಯುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.