ADVERTISEMENT

ಜೈಲಿನ ಕೈಪಿಡಿ ಓದಿಕೊಳ್ಳಿ: ಸಿಸೋಡಿಯಾಗೆ ಬಿಜೆಪಿ ಲೇವಡಿ

ಸರಿಯಾದ ಆಹಾರ ಪೂರೈಕೆಗೆ ಕೋರ್ಟ್‌ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2022, 14:51 IST
Last Updated 23 ನವೆಂಬರ್ 2022, 14:51 IST
   

ನವದೆಹಲಿ: ತಿಹಾರ್‌ ಜೈಲಿನಲ್ಲಿ ಸಚಿವ ಸತ್ಯೇಂದ್ರ ಜೈನ್‌ ಊಟದ ವಿಡಿಯೊಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ, ಜೈಲಿನ ಕೈಪಿಡಿ ಓದಿಕೊಳ್ಳಿ. ಮುಂದೆ ಯಾರಿಗೆ ಜೈಲಿನ ಆತಿಥ್ಯ ಸಿಗಲಿದೆ ಎಂಬುದು ನಿಮಗೂ ತಿಳಿದಿಲ್ಲ ಎಂದು ಆಪ್‌ ನಾಯಕ ಮನೀಶ್‌ ಸಿಸೋಡಿಯಾಗೆ ಲೇವಡಿ ಮಾಡಿದೆ.


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದ್ರ ಜೈನ್‌ ಆಹಾರ ಸೇವನೆಯ ಮತ್ತೊಂದು ವಿಡಿಯೊವನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಅದರಲ್ಲಿ ಜೈನ್‌ ಜೈಲಿನೊಳಗೆ ಸಲಾಡ್‌, ಹಣ್ಣು ಹಾಗೂ ಭೂರಿ ಭೋಜನೆ ಆಹಾರ ಸೇವಿಸುತ್ತಿದ್ದಾರೆ. ಆಪ್‌ ಈ ವಿಡಿಯೊಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿಲ್ಲ.


ಜೈಲಿನಲ್ಲಿ ಸರಿಯಾದ ಊಟ ಸಿಗದೆ 28 ಕೆಜಿ ತೂಕ ಇಳಿದಿದೆ ಎಂದು ಜೈನ್‌ ದೂರು ನೀಡಿದ ಬೆನ್ನಲ್ಲೇ ಬಿಜೆಪಿ ಈ ವಿಡಿಯೊ ಹರಿಬಿಟ್ಟಿದೆ.

ADVERTISEMENT


ಸರಿಯಾದ ಆಹಾರ ಪೂರೈಕೆಗೆ ಸೂಚನೆ:
ಜೈಲಿನಲ್ಲಿರುವ ಆಪ್ ಸಚಿವ ಸತ್ಯೇಂದ್ರ ಕುಮಾರ್ ಜೈನ್ ಅವರ ಧಾರ್ಮಿಕ ಉಪವಾಸದ ಸಂದರ್ಭದಲ್ಲಿ ಸಂಬಂಧಿತ ನಿಯಮಗಳಿಗೆ ಅನುಗುಣವಾಗಿ ಆಹಾರವನ್ನು ನೀಡುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ಬುಧವಾರ ಸೂಚಿಸಿದೆ.


ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್, ಜೈನ್‌ಗೆ ಕಳೆದ ಆರು ತಿಂಗಳಲ್ಲಿ ನೀಡಿದ ಆಹಾರದ ವಿವರಗಳೊಂದಿಗೆ ತನ್ನ ಉತ್ತರವನ್ನು ಗುರುವಾರದೊಳಗೆ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ‌


ಜೈನ್ ಅವರ ಧಾರ್ಮಿಕ ಉಪವಾಸದ ಸಮಯದಲ್ಲಿ "ಕಾನೂನು ಪ್ರಕಾರ" ಅನುಮತಿಸಲಾದ ಆಹಾರವನ್ನು ನೀಡುವುದನ್ನು ಜೈಲು ಆಡಳಿತವು ನಿಲ್ಲಿಸಿದೆ ಎಂದು ಆರೋಪಿಸಿ ಜೈನ್ ಮನವಿ ಸಲ್ಲಿಸಿದ್ದರು.


ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಹುಲ್ ಮೆಹ್ರಾ, ರಾಜಕಾರಣಿಗಳಿಗೆಸಿಗುತ್ತಿದ್ದ ಹಣ್ಣು, ತರಕಾರಿ, ಡ್ರೈಫ್ರೂಟ್ಸ್‌ ಜೈಲು ಅಧಿಕಾರಿಗಳು ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಉಪವಾಸದ ಸಮಯದಲ್ಲಿ ಜೈನ್ ಈ ವಿಶೇಷ ಆಹಾರಕ್ರಮಕ್ಕೆ ಅರ್ಹರು ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.