ನವದೆಹಲಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಗುರಿಯೊಂದಿಗೆ ದೆಹಲಿ ಸರ್ಕಾರವು 1000ಕ್ಕೂ ಹೆಚ್ಚು ವೈದ್ಯರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.
ನೇಮಕಾತಿ ಪ್ರಕ್ರಿಯೆಯು ರಾಷ್ಟ್ರೀಯ ಆರೋಗ್ಯ ಮಿಷನ್ ಮಾರ್ಗಸೂಚಿಗಳ ಅಡಿಯಲ್ಲಿ ನಡೆಸಲಾಗುತ್ತದೆ. ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನೇಮಕಾತಿ ಪ್ರಕ್ರಿಯೆಯು ಕ್ರಮವಾಗಿ ಜರುಗಲಿದ್ದು, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಸಂದರ್ಶನ ಪ್ರಕ್ರಿಯೆಗೆ ಒಳಗಾಗುತ್ತಾರೆ. ಬಳಿಕ ಕೌಶಲ್ಯ ಆಧಾರಿತ ಪರೀಕ್ಷೆಗೆಯನ್ನು ಎದುರಿಸುತ್ತಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಪ್ರಾಥಮಿಕ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಭಾಗವಾಗಿ 2026ರ ವೇಳೆಗೆ ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಹಣಕಾಸು ಖಾತೆಯನ್ನೂ ಹೊಂದಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಮ್ಮ ಬಜೆಟ್ ಭಾಷಣದಲ್ಲಿ, ದೆಹಲಿಯಾದ್ಯಂತ 1,139 ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು.
ಏತನ್ಮಧ್ಯೆ, ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಮೊಹಲ್ಲಾ ಚಿಕಿತ್ಸಾಲಯಗಳನ್ನು ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಲು ಯೋಜಿಸುತ್ತಿರುವುದರಿಂದ ಕೆಲವು ವೈದ್ಯರು ತಮ್ಮ ಉದ್ಯೋಗಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಮೊಹಲ್ಲಾ ಕ್ಲಿನಿಕ್ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವುದಿಲ್ಲ ಎಂದು ಗುಪ್ತಾ ಭರವಸೆ ನೀಡಿದ್ದಾರೆ. ದೆಹಲಿ ಸರ್ಕಾರ ಪರಿಚಯಿಸುತ್ತಿರುವ ಹೊಸ ಆರೋಗ್ಯ ಯೋಜನೆಯಲ್ಲಿ ಅಸ್ತಿತ್ವದಲ್ಲಿರುವ ಉದ್ಯೋಗಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಗುಪ್ತಾ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.