
ಹೆಚ್ಚಿದ ತಾಪಮಾನ
ನವದೆಹಲಿ: ಬೇಸಿಗೆಯ ಕಾರಣದಿಂದಾಗಿ ದೆಹಲಿಯಲ್ಲಿ ಈಗಾಗಲೇ ಬಿಸಿ ವಾತಾವರಣವಿದ್ದು ತೀವ್ರ ಬಿಸಿಲಿನಿಂದಾಗಿ, ಬೆಂಕಿ ಸಂಬಂಧಿತ ವಿಷಯಗಳಿಗೆ ಅಗ್ನಿಶಾಮಕ ಇಲಾಖೆಗೆ ಒಂದೇ ದಿನದಲ್ಲಿ 220 ಕರೆಗಳು ಬಂದಿವೆ.
ಅಗ್ನಿಶಾಮಕ ಇಲಾಖೆಯ ನಿರ್ದೇಶಕ, ಅತುಲ್ ಗರ್ಗ್ ಅವರು ಒಂದೇ ದಿನದಲ್ಲಿ 220 ಕರೆಗಳು ಬಂದಿರುವುದನ್ನು ಖಚಿತಪಡಿಸಿದ್ದಾರೆ. ದೀಪಾವಳಿಯಂದು ಹೊರತುಪಡಿಸಿ, ಇದು ಇಲ್ಲಿಯವರೆಗಿನ ಅತಿ ಹೆಚ್ಚು ಕರೆಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.
ನಮ್ಮ ಸಿಬ್ಬಂದಿ ಕರೆ ಬಂದ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರೆ. ಹಲವು ಪ್ರದೇಶಗಳಲ್ಲಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ದೆಹಲಿಯ ಮುಂಗೇಶಪುರದಲ್ಲಿ ಬುಧವಾರ ಗರಿಷ್ಠ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ದೆಹಲಿಯಲ್ಲಿ ದಾಖಲಾಗಿರುವ ಈವರೆಗಿನ ಗರಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದಿಂದ ಬೀಸುವ ಬಿಸಿ ಗಾಳಿಯು ಮೊದಲಿಗೆ ದೆಹಲಿ ನಗರದ ಹೊರ ವಲಯದಲ್ಲಿರುವ ಮುಂಗೇಶಪುರ, ನರೆಲಾ ಮತ್ತು ನಜಾಫಗಢ ಪ್ರದೇಶಗಳಿಗೆ ತಟ್ಟುತ್ತದೆ. ಇದರಿಂದ ಈ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ವಿವರಿಸಿದ್ದಾರೆ.
ಬಿಹಾರದ ಔರಂಗಾಬಾದ್, ಉತ್ತರ ಪ್ರದೇಶದ ಕಾನ್ಪುರ, ಪ್ರಯಾಗ್‌ರಾಜ್, ಆಗ್ರಾ, ಹರಿಯಾಣದ ರೋಹ್ಟಕ್, ನರ್ನಾಲ್, ಸಿರ್ಸಾ, ಪಂಜಾಬಿನ ಭಟಿಂಡಾದಲ್ಲಿ 48 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಹರಿಯಾಣದ ಮಹೇಂದ್ರಗಢದಲ್ಲಿ 49.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.