ADVERTISEMENT

ದೆಹಲಿ ಚುನಾವಣೆ: ಮಾಜಿ ಸಚಿವ ಜಿತೇಂದ್ರ ಸಿಂಗ್ ತೋಮರ್ ಕೈಬಿಟ್ಟ ಎಎಪಿ

ತೋಮರ್ ಪತ್ನಿ ಪ್ರೀತಿಗೆ ಟಿಕೆಟ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 10:31 IST
Last Updated 21 ಜನವರಿ 2020, 10:31 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (ಸಂಗ್ರಹ ಚಿತ್ರ)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (ಸಂಗ್ರಹ ಚಿತ್ರ)   

ನವದೆಹಲಿ:ವಿಧಾನಸಭೆ ಚುನಾವಣೆಗೆ ತ್ರಿನಗರ ಕ್ಷೇತ್ರದಿಂದ ಮಾಜಿ ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ) ಕೊನೇ ಕ್ಷಣದಲ್ಲಿ ಸದ್ದಿಲ್ಲದೇ ತೋಮರ್ ಪತ್ನಿ ಪ್ರೀತಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ತೋಮರ್ ಅವರ 2015ರ ಚುನಾವಣಾ ಗೆಲುವನ್ನು ದೆಹಲಿ ಹೈಕೋರ್ಟ್ ಅಸಿಂಧುಗೊಳಿಸಿರುವುದರಿಂದ ಪಕ್ಷ ಈ ಕ್ರಮ ಕೈಗೊಂಡಿದೆ. ಪ್ರೀತಿ ಅವರು ಸೋಮವಾರವೇ ನಾಮಪತ್ರ ಸಲ್ಲಿಸಿದ್ದಾರೆ.

2015ರ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ನಕಲಿ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿದ್ದ ಆರೋಪತೋಮರ್ ಮೇಲಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ತೋಮರ್ ಗೆಲುವನ್ನು ಅಸಿಂಧುಗೊಳಿಸಿ ಶುಕ್ರವಾರ ತೀರ್ಪು ಪ್ರಕಟಿಸಿತ್ತು. ಇದರ ಬೆನ್ನಲ್ಲೇ, ತೋಮರ್ ಸ್ಪರ್ಧಿಸುವುದನ್ನು ಬಿಜೆಪಿಯು ಚುನಾವಣಾ ಆಯೋಗದ ಬಳಿಪ್ರಶ್ನಿಸಿತ್ತು. ಅಲ್ಲದೆ, ಎಎಪಿ ಕಳಂಕಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುತ್ತಿದೆ ಎಂದು ಆರೋಪಿಸಿತ್ತು.

‘ನನ್ನ ಪತ್ನಿಯು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷಕ್ಕೆ ತಿಳಿಸಿದ್ದೆ. ಪಕ್ಷವು ಅದನ್ನು ಒಪ್ಪಿದೆ’ ಎಂದು ತೋಮರ್ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಶನಿವಾರ ನಾಮಪತ್ರ ಸಲ್ಲಿಸುವುದಾಗಿಯೂ ಈ ಹಿಂದೆ ಅವರು ಹೇಳಿದ್ದರು. ಆದರೆ, ಹೈಕೋರ್ಟ್ ತೀರ್ಪಿನ ಬಳಿಕ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ.

ನಕಲಿ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿದ್ದ ಪ್ರಕರಣ 2015ರಲ್ಲೇ ವಿವಾದಕ್ಕೀಡಾಗಿತ್ತು. ಬಳಿಕ ಅವರು ಅರವಿಂದ ಕೇಜ್ರಿವಾಲ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದಲ್ಲಿ ತೋಮರ್ ಅವರು ಬಂಧನಕ್ಕೂ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.