ಅರವಿಂದ ಕೇಜ್ರಿವಾಲ್
– ಪಿಟಿಐ ಚಿತ್ರ
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಕೇವಲ ದೆಹಲಿಯ ಚುನಾವಣೆ ಮಾತ್ರವಲ್ಲ ಇಡೀ ದೇಶದ ಚುನಾವಣೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಸ್ಪರ್ಧೆ. ಒಂದು ಜನಸಾಮಾನ್ಯರ ಕಲ್ಯಾಣದ ಬಗ್ಗೆ ಕೇಂದ್ರೀಕೃತವಾದುದು, ಇನ್ನೊಂದು ಆಯ್ದ ಶ್ರೀಮಂತರ ಕಲ್ಯಾಣ ಕೇಂದ್ರೀಕೃತವಾದುದು’ ಎಂದು ಹೇಳಿದ್ದಾರೆ.
‘ಇದು ತೆರಿಗೆ ಪಾವತಿದಾರರ ಹಣವನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದನ್ನು ನಿರ್ಧರಿಸುವ ಚುನಾವಣೆ. ಬಿಜೆಪಿ ಪ್ರತಿಪಾದಿಸುವ ಒಂದು ಸಿದ್ಧಾಂತವು, ತಮ್ಮ ಸ್ನೇಹಿತರ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾಮಾಡಲು ಸಾರ್ವಜನಿಕರ ಹಣವನ್ನು ಬಳಕೆ ಮಾಡುತ್ತದೆ. ನಮ್ಮ ಎಎಪಿ ಮಾದರಿಯು, ಉಚಿತ ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ಸಾರಿಗೆ ನೀಡುತ್ತಿದೆ. ಇದು ಜನ ಸಾಮಾನ್ಯನಿಗೆ ಉಪಯೋಗ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, 400–500 ಉದ್ಯಮಪತಿಗಳ ಸುಮಾರು ₹10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ ಎಂದು ಆರೋಪಿಸಿದರು.
‘ತಮ್ಮ ಸ್ನೇಹಿತರಿಗೆ ಸಾಲದ ಮೂಲಕ ಹಣ ನೀಡಿ, ಅವುಗಳನ್ನು ಎರಡ್ಮೂರು ವರ್ಷಗಳಲ್ಲಿ ಮನ್ನಾ ಮಾಡುವುದು ಬಿಜೆಪಿ ಮಾದರಿ. ಆದರೆ ಎಎಪಿಯ ಕಲ್ಯಾಣ ಯೋಜನೆಗಳು ದೆಹಲಿಯ ಪ್ರತಿ ವ್ಯಕ್ತಿಯ ಮೇಲೆ ತಿಂಗಳಿಗೆ ಸುಮಾರು ₹ 25 ಸಾವಿರ ಖರ್ಚು ಮಾಡುತ್ತಿವೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ರದ್ದು ಮಾಡಲಿದೆ’ ಎಂದಿದ್ದಾರೆ.
ಕಲ್ಯಾಣ ಯೋಜನೆಗಳನ್ನು ಉಚಿತ ಯೋಜನೆಗಳು ಎಂದು ಕರೆದಿರುವ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಧ್ಯಮ ವರ್ಗದ ಜನರಲ್ಲಿ ತಪ್ಪಿತಸ್ಥ ಭಾವನೆಯನ್ನು ಮೂಡಿಸುತ್ತಿದೆ. ಆದರೆ ದೊಡ್ಡ ಉದ್ಯಮಪತಿಗಳಿಗೆ ಬಿಜೆಪಿ ದೊಡ್ಡ ಕೊಡುಗೆಯನ್ನೇ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿದ್ದು ಉಚಿತ ಕೊಡುಗೆಯಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.