ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ನಂತರ ಶಾಯಿ ಗುರುತನ್ನು ಮಹಿಳೆಯೊಬ್ಬರು ತೋರಿಸಿದರು
ಪಿಟಿಐ ಚಿತ್ರ
ನವದೆಹಲಿ: ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಮತದಾನ ಬಹುತೇಕ ಪೂರ್ಣಗೊಂಡಿದೆ. ಚುನಾವಣೋತ್ತರ ಸಮೀಕ್ಷೆಯ ನಿರೀಕ್ಷೆಯಲ್ಲಿ ಜನರು ಇದ್ದಾರೆ.
ಇಂದು ನಡೆದ ಮತದಾನದಲ್ಲಿ ಸಂಜೆ 5ರವರೆಗೂ ಶೇ 57ರಷ್ಟು ಮತದಾನವಾಗಿದೆ. ಒಟ್ಟು 70 ಕ್ಷೇತ್ರಗಳಿಗೆ 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 13,766 ಮತಗಟ್ಟೆಗಳಲ್ಲಿ ಮತದಾನ ಕೊನೆಯ ಹಂತ ತಲುಪಿದೆ.
2020ರಲ್ಲಿ ದೆಹಲಿಯಲ್ಲಿ ದಾಖಲೆಯ ಶೇ 62.59ರಷ್ಟು ಮತದಾನವಾಗಿತ್ತು. 2013, 2015 ಹಾಗೂ 2020ರಲ್ಲಿ ಎಎಪಿ ಉತ್ತಮ ಫಲಿತಾಂಶ ಹೊಂದಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದ್ದವು.
2013ರಲ್ಲಿ ಎಎಪಿ ಮೊದಲ ಬಾರಿಗೆ ಸ್ಪರ್ಧಿಸಿತ್ತು. ಎಎಪಿ ಮತ್ತು ಕಾಂಗ್ರೆಸ್ ತಲಾ 17 ಕ್ಷೇತ್ರಗಳನ್ನು ಗೆಲ್ಲಲಿವೆ. ಬಿಜೆಪಿ 34 ಕ್ಷೇತ್ರಗಳನ್ನು ಗೆಲಲ್ಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಆ ಚುನಾವಣೆಯಲ್ಲಿ ಎಎಪಿ 28 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 8 ಹಾಗೂ ಬಿಜೆಪಿ 31 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಈ ಚುನಾವಣೆಯು ಕಾಂಗ್ರೆಸ್‌ನ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಿತು.
2015ರ ಚುನಾವಣೆಯಲ್ಲಿ ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಎಎಪಿಗೆ 35ರಿಂದ 43 ಹಾಗೂ ಬಿಜೆಪಿ 25–33 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿತ್ತು. ಟುಡೇಸ್ ಚಾಣಕ್ಯ ಸಂಸ್ಥೆಯು ಎಎಪಿಗೆ 48 ಸೀಟುಗಳನ್ನು, ಬಿಜೆಪಿಗೆ 22 ಸೀಟುಗಳನ್ನು ನೀಡಿತ್ತು. ಎಬಿಪಿ ಸಮೀಕ್ಷೆಯಲ್ಲಿ ಎಎಪಿ 43 ಕ್ಷೇತ್ರಗಳನ್ನು ಮತ್ತು ಬಿಜೆಪಿ 26 ಕ್ಷೇತ್ರಗಳನ್ನು ಗೆಲಲ್ಲಿವೆ ಎಂದು ಅಂದಾಜಿಸಲಾಗಿತ್ತು. ಚುನಾವಣೋತ್ತರ ಸಮೀಕ್ಷೆಗಿಂತ ಎಎಪಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಎಎಪಿ 67 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ದಾಖಲಿಸಿತು.
2020ರಲ್ಲಿ ಎಎಪಿ 53 ಕ್ಷೇತ್ರಗಳನ್ನು, ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಟಿವಿ–ಸಿ ವೋಟರ್ ಹೇಳಿತ್ತು. ಎಬಿಪಿ ಅಂದಾಜಿನ ಪ್ರಕಾರ ಎಎಪಿ 51ರಿಂದ 65 ಕ್ಷೇತ್ರಗಳನ್ನು, ಬಿಜೆಪಿ 3-17 ಕ್ಷೇತ್ರಗಳನ್ನು ಗೆಲ್ಲಲಿವೆ ಎಂದು ಅಂದಾಜಿಸಲಾಗಿತ್ತು. ಜನ್ ಕಿ ಬಾತ್ ಪ್ರಕಾರ ಎಎಪಿ–55; ಬಿಜೆಪಿ–15; ನ್ಯೂಸ್‌ಎಕ್ಸ್–ನೇತಾ ಪ್ರಕಾರ ಎಎಪಿ–55, ಬಿಜೆಪಿ–14; ಇಂಡಿಯಾ ಟುಡೆ–ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಎಎಪಿ 59–68; ಬಿಜೆಪಿ 2–11; ಟೈಮ್ಸ್ ನೌ ಸಮೀಕ್ಷೆಯಲ್ಲಿ ಎಎಪಿಗೆ 47 ಹಾಗೂ ಬಿಜೆಪಿಗೆ 23; ಇಂಡಿಯಾ ನ್ಯೂಸ್– ನ್ಯೂಸ್ ನೇಷನ್ ಅಂದಾಜಿನ ಪ್ರಕಾರ ಎಎಪಿಗೆ 55 ಹಾಗೂ ಬಿಜೆಪಿಗೆ 14 ಸೀಟುಗಳು ಸಿಗಬಹುದು ಎಂದು ಅಂದಾಜಿಸಲಾಗಿತ್ತು.
ಈ ಚುನಾವಣೆಯಲ್ಲಿ ಎಎಪಿ 62 ಕ್ಷೇತ್ರಗಳನ್ನು ಗೆದ್ದು ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಬಿಜೆಪಿ 8 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿಯೂ ಕಾಂಗ್ರೆಸ್ ಶೂನ್ಯ ಫಲಿತಾಂಶ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.